ನವದೆಹಲಿ: ನಿರ್ಭಯಾ ಅತ್ಯಾಚಾರಿ ಅಪರಾಧಿಗಳಿಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆಗೆ ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ ನೀಡಿದ್ದ ಆದೇಶಕ್ಕೆ ಮುಂದಿನ ಆದೇಶದವರೆಗೂ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ. ನಾಳೆ ಬೆಳಗ್ಗೆ ನಡೆಯಬೇಕಾಗಿದ್ದ ಗಲ್ಲುಶಿಕ್ಷೆ ಮುಂದೂಡಿಕೆಯಾಗಿದೆ.
ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಕೆಲವೇ ಗಂಟೆಗಳು ಬಾಕಿ ಇರುವಾಗಲೇ ಸುಪ್ರೀಂಕೋರ್ಟ್ನಿಂದ ಈ ರೀತಿಯ ಆದೇಶ ಹೊರಬಿದ್ದಿರುವುದು ಸಂತ್ರಸ್ತೆ ತಾಯಿ ಆಶಾದೇವಿಗೆ ಆಘಾತ ನೀಡಿದ್ದು, ಕೋರ್ಟ್ ಎದುರೇ ಗಳಗಳನೇ ಕಣ್ಣೀರು ಹಾಕಿದ್ದಾರೆ.
ಈಗಾಗಲೇ ಒಂದು ಸಲ ಅತ್ಯಾಚಾರಿಗಳಿಗೆ ವಿಧಿಸಲಾಗಿದ್ದ ಗಲ್ಲುಶಿಕ್ಷೆ ಮುಂದೂಡಿಕೆ ಮಾಡಲಾಗಿತ್ತು. ಆದರೆ ಇದೀಗ ಮತ್ತೊಮ್ಮೆ ಅದೇ ರೀತಿಯಾಗಿ ಆದೇಶ ಹೊರಬಿದ್ದಿದೆ. ಇದರ ಮಧ್ಯೆ ದೋಷಿಗಳ ಪರ ವಾದ ಮಂಡನೆ ಮಾಡುತ್ತಿರುವ ವಕೀಲರೊಬ್ಬರು, ಯಾವುದೇ ಕಾರಣಕ್ಕೂ ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗಲು ಬಿಡುವುದಿಲ್ಲ ಎಂದು ನನಗೆ ಸವಾಲು ಹಾಕಿದ್ದಾರೆ ಎಂದು ತಮ್ಮ ಅಳಲು ಹೊರಹಾಕಿದರು.
2012ರಲ್ಲಿ ನಡೆದಿರುವ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಈಗಾಗಲೇ ಮರಣದಂಡನೆ ವಿಧಿಸಿ ಸುಪ್ರೀಂಕೋರ್ಟ್ ಆದೇಶ ಹೊರಹಾಕಿತ್ತು. ಆದರೆ ಓರ್ವ ಆರೋಪಿ ಬುಧವಾರ ರಾಷ್ಟ್ರಪತಿಗಳ ಮುಂದೆ ಕರುಣೆ ಅರ್ಜಿಯನ್ನು ಸಲ್ಲಿಸಿದ್ದರಿಂದ ಮರಣದಂಡನೆ ಮುಂದೂಡಿಕೆ ಮಾಡಲಾಗಿತ್ತು. ಇದರ ಮಧ್ಯೆ ಮತ್ತೊಬ್ಬ ಆರೋಪಿ ಸುಪ್ರೀಂಕೋರ್ಟ್ ಮುಂದೆ ಪರಿಹಾರಾತ್ಮಕ ಅರ್ಜಿಯನ್ನು ಸಲ್ಲಿಸಿದ್ದರು.
ಇನ್ನು ಮೀರತ್ ಕಾರಾಗೃಹದ ಹ್ಯಾಂಗ್‌ಮ್ಯಾನ್ ಪವನ್ ಜಲ್ಲಾಡ್ ನಿರ್ಭಯಾ ಪ್ರಕರಣದ ಆರೋಪಿಗಳ ಮರಣದಂಡನೆಯ ಅಣುಕು ಪ್ರದರ್ಶನವನ್ನು ತಿಹಾರ್ ಜೈಲು ಆವರಣದಲ್ಲಿ ಇಂದು ನಡೆಸಿದ್ದಾಗಿ ಜೈಲಿನ ಅಧಿಕಾರಿಗಳು ಮಾಹಿತಿ ನೀಡಿದ್ದರು.