ಸೂರ್ಯಪೇಟೆ : ಚೀನಾ-ಭಾರತ ನಡುವಿನ ಗಡಿ ಘರ್ಷಣೆಯಲ್ಲಿ ಹುತಾತ್ಮರಾದ ತೆಲಂಗಾಣದ ವೀರ ಯೋಧ ಕರ್ನಲ್ ಬಿಕ್ಕಮಲ್ಲಾ ಸಂತೋಷ್ ಬಾಬು ಅವರ ಪಾರ್ಥಿವ ಶರೀರವನ್ನು ವಿದ್ಯಾನಗರದಲ್ಲಿರುವ ಅವರ ನಿವಾಸಕ್ಕೆ ತರಲಾಯಿತು.
ತ್ರಿವರ್ಣ ಧ್ವಜ ಸುತ್ತಿದ ಶವ ಪೆಟ್ಟಿಗೆಯನ್ನು ಸೇನಾ ಸಿಬ್ಬಂದಿ ಆ್ಯಂಬುಲೆನ್ಸ್‌ನಿಂದ ಹೊರಗೆ ತರುತ್ತಿದ್ದಂತೆ ರಾಷ್ಟ್ರ ಧ್ವಜ ಹಿಡಿದು ನಿಂತಿದ್ದ ಜನರು "ಸಂತೋಷ್ ಬಾಬು ಅಮರ್ ಹೈ" ಎಂಬ ಘೋಷಣೆಗಳೊಂದಿಗೆ ಯೋಧನ ಬಲಿದಾನಕ್ಕೆ ಗೌರವ ನಮನ ಸಲ್ಲಿಸಿದರು.
ವಿಶೇಷ ವಿಮಾನದಲ್ಲಿ ದೆಹಲಿಯಿಂದ ರಾತ್ರಿ 8 ಗಂಟೆಗೆ ಹೈದರಾಬಾದ್ ಬಳಿಯ ಹಕೀಂಪೇಟೆ ವಾಯು ನೆಲೆಗೆ ಮೃತದೇಹ ತರಲಾಯಿತು. ಅಲ್ಲಿ ತೆಲಂಗಾಣ ರಾಜ್ಯಪಾಲರಾದ ತಮಿಳುಸಾಯಿ ಸುಂದರಾಜನ್ ಮತ್ತು ಐಟಿ ಮತ್ತು ಕೈಗಾರಿಕಾ ಸಚಿವ ಕೆ.ಟಿ ರಾಮರಾವ್ ಅಂತಿಮ ನಮನ ಸಲ್ಲಿಸಿದರು. ಹುತಾತ್ಮ ಸೇನಾಧಿಕಾರಿಯ ಸರ್ವೋಚ್ಚ ತ್ಯಾಗವನ್ನು ರಾಷ್ಟ್ರ ಸ್ಮರಿಸುತ್ತದೆ ಎಂದು ಈ ವೇಳೆ ರಾಜ್ಯಪಾಲರು ಹೇಳಿದರು.
ಮೃತ ಯೋಧನ ಅಂತ್ಯಕ್ರಿಯೆ ಗುರುವಾರ ಕುಟುಂಬದ ಸ್ವಂತ ಜಮೀನಿನಲ್ಲಿ ನಡೆಯಿತು. ಕುಟುಂಬಸ್ಥರು ಬೆಳಗ್ಗೆಯಿಂದಲೇ ವಿಧಿವಿಧಾನಗಳನ್ನು ನಡೆಸಿದರು. ಬಳಿಕ ಸೇನಾ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು.
ಹುತಾತ್ಮಯೋಧ ಸಂತೋಷ್ ಅವರ ಪತ್ನಿ ಸಂತೋಶಿ ಇಬ್ಬರು ಮಕ್ಕಳೊಂದಿಗೆ ದೆಹಲಿಯಿಂದ ಬುಧವಾರ ಬೆಳಗ್ಗೆ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿಳಿದರು, ಈ ವೇಳೆ ಸೈಬರಾಬಾದ್ ಪೊಲೀಸ್ ಆಯುಕ್ತ ವಿ.ಸಿ.ಸಜ್ಜನರ್ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವೀಕರಿಸಿ ಸಾಂತ್ವನ ಹೇಳಿದರು.