ನವದೆಹಲಿ: ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ (ಎಫ್‍ಎಒ) 75ನೇ ವರ್ಷಾಚರಣೆಯ ನೆನಪಿಗಾಗಿ ಪ್ರಧಾನಿ ನರೇಂದ್ರ ಮೋದಿ ಇಂದು 75 ರೂ. ಮುಖ ಬೆಲೆಯ ನಾಣ್ಯ ಬಿಡುಗಡೆ ಮಾಡಿದರು. ಇದೇ ವೇಳೆ ಮಾತನಾಡಿದ ಅವರು, ದೇಶದ ಹೆಣ್ಣು ಮಕ್ಕಳ ಮದುವೆ ವಯಸ್ಸಿನ ಬಗ್ಗೆ ಶೀಘ್ರದಲ್ಲೇ ಮಹತ್ವದ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ.
ಇದಕ್ಕೆ ಸಂಬಂಧಪಟ್ಟ ಸಮಿತಿ ತನ್ನ ವರದಿ ಸಲ್ಲಿಕೆ ಮಾಡಿದ ತಕ್ಷಣವೇ ವಯಸ್ಸಿನ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ಮೋದಿ ದೇಶದ ಹೆಣ್ಣುಮಕ್ಕಳಿಗೆ ಭರವಸೆ ನೀಡಿದ್ದಾರೆ.
ದೇಶದಲ್ಲಿ ಹೆಣ್ಣು ಮಕ್ಕಳ ಮದುವೆ ವಯಸ್ಸಿನ ಬಗ್ಗೆ ನಿರ್ಧರಿಸಲು ಚರ್ಚೆ ನಡೆಯುತ್ತಿದೆ. ಇದಕ್ಕೆ ಸಂಬಂಧಪಟ್ಟ ಸಮಿತಿ ಇಲ್ಲಿಯವರೆಗೆ ವರದಿ ಯಾಕೆ ನೀಡಿಲ್ಲ ಎಂದು ದೇಶದ ಹೆಣ್ಣುಮಕ್ಕಳು ನನಗೆ ಪತ್ರ ಬರೆದಿದ್ದಾರೆ. ಈ ವರದಿ ಬಂದ ಕೂಡಲೇ ಸರ್ಕಾರ ಮಹತ್ವದ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಮಹಿಳೆಯರ ಆರೋಗ್ಯ ಮತ್ತು ನೈರ್ಮಲ್ಯದ ನಿರ್ವಹಣೆಗಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ನಮೋ ಮಾತನಾಡಿದರು. ನಮ್ಮ ಹೆಣ್ಣು ಮಕ್ಕಳ ಯೋಗಕ್ಷೇಮಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳುತ್ತಿದ್ದೇವೆ. ಜಲ್ ಜೀವನ್ ಮಿಷನ್ ಮೂಲಕ ಪ್ರತಿ ಮನೆಗೆ ನೀರು ಒದಗಿಸುವ ಕೆಲಸ ಮಾಡಲಾಗುತ್ತಿದ್ದು, 1ರೂ.ಗೆ ಸ್ಯಾನಿಟರಿ ಪ್ಯಾಡ್ ನೀಡುತ್ತಿದ್ದೇವೆ ಎಂದರು. ಮದುವೆ ಮತ್ತು ಮಾತೃತ್ವದ ವಯಸ್ಸಿನ ಬಗ್ಗೆ ಸದ್ಯ ಸಮಿತಿ ಅಧ್ಯಯನ ನಡೆಸಿದ್ದು, ಆದಷ್ಟು ಬೇಗ ವರದಿ ಕೈಸೇರಲಿದೆ ಎಂದಿದ್ದಾರೆ.
ಇದೇ ವೇಳೆ ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಲು ನಿರ್ಧರಿಸಿರುವ ಕೃಷಿ ಮಸೂದೆಗಳಿಂದ ಅನ್ನದಾತರಿಗೆ ಹೆಚ್ಚಿನ ಲಾಭವಾಗಲಿದೆ ಎಂದಿದ್ದಾರೆ.