ನವದೆಹಲಿ: ಗುರುವಾರ ಎರಡನೇ ಅವಧಿಗೆ ಪ್ರಮಾಣ ವಚ್ಚನ ಸ್ವೀಕರಿಸಲು ಅಣಿಯಾಗಿರುವ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರು, ತಮ್ಮ 2.0 ಆಡಳಿತಾವಧಿಯಲ್ಲಿ ಉಡಾನ್ ಯೋಜನೆಗೆ ಇನ್ನಷ್ಟು ಬಲ ತುಂಬಲಿದ್ದಾರೆ ಎಂದು ಯೋಜನೆ ಅಧಿಕಾರಿಗಳು ನಿರೀಕ್ಷಿಸುತ್ತಿದ್ದಾರೆ.
ಉಡಾನ್ (ಉಡೇ ದೇಶ್ ಕಾ ಆಮ್ ನಾಗರಿಕ್) ಯೋಜನೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದು, ಕೋಟ್ಯಂತರ ಜನಸಾಮಾನ್ಯರನ್ನು ವಾಯುಯಾನಕ್ಕೆ ಪರಿಚಯಿಸುವ ಪ್ರಸ್ತಾವನೆಯನ್ನು ನಾಗರಿಕ ವಿಮಾನಯಾನ ಸಚಿವಾಲಯ ಸಿದ್ಧಪಡಿಸಿದೆ. ಈ ಯೋಜನೆಗೆ ಹೆಚ್ಚುವರಿ ಫಂಡ್ ಪಡೆದು ಉಡಾನ್ ರೆಕ್ಕೆಯನ್ನು ಮತ್ತಷ್ಟು ಬಲಗೊಳಿಸುವ ಕಾರ್ಯತಂತ್ರ ಹೆಣೆದಿದೆ.
ಉಡಾನ್ನ ಉದ್ದೇಶಿತ ಯೋಜನೆಗಳು ಕಾರ್ಯರೂಪಕ್ಕೆ ತರುವ ಕೊರತೆಗಳಿಗೆ ಹೆಚ್ಚುವರಿ ಅನುದಾನದ ಅವಶ್ಯಕತೆಯಿದೆ. ಯೋಜನೆ ಕಾರ್ಯಸಾಧು ಬಗ್ಗೆ ಸಮರ್ಥವಾಗಿ ವಾದ ಮಂಡಿಸಿ ಪ್ರಾಧಿಕಾರದ ಮೂಲಕ ಅನುಮೋದನೆ ಪಡೆಯುತ್ತೇವೆ ಎಂಬ ವಿಶ್ವಾಸವನ್ನು ಹಿರಿಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಮಾಡಿಕೊಂಡ ಒಪ್ಪಂದದಂತೆ ಪ್ರಾದೇಶಿಕವಾಗಿ ಸಂಪರ್ಕ ಕಲ್ಪಿಸುವ ಎಲ್ಲ ಮಾರ್ಗಗಳ ಕಾರ್ಯಾಚರಣೆ ಆರಂಭವಾಗಿದೆ. ಸದ್ಯ ಲಭ್ಯವಿರುವ ಅನುದಾನ ಸಾಕಾಗುತ್ತಿಲ್ಲ. ಹೆಚ್ಚಿನ ಫಂಡ್ಗೆ ಬೇಡಿಕೆ ಇರಿಸಿ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರ(ಎಎಐ) ಉಡಾನ್ ಯೋಜನೆ ಅನುಷ್ಠಾನಕ್ಕೆ ವಾರ್ಷಿಕ ಒಟ್ಟು ₹ 1,800- ₹ 2,000 ಕೋಟಿಯಷ್ಟು ಸಬ್ಸಿಡಿ ಒದಗಿಸುತ್ತಿದೆ.
ಕೇಂದ್ರ ಸರ್ಕಾರ ಜನಸಾಮನ್ಯರು ಕೂಡ ಕಡಿಮೆ ಶುಲ್ಕದಲ್ಲಿ ವಿಮಾನ ಸೇವೆ ಪಡೆಯಬೇಕು ಎಂಬ ಆಶಯದಿಂದ ಟಿಕೆಟ್ ಮೇಲೆ ಕಡಿಮೆ ತೆರಿಗೆ ದರ, ಏರ್ಪೋರ್ಟ್ ಶುಲ್ಕದಲ್ಲಿ ರಿಯಾಯಿತಿ ಸೇರಿದಂತೆ ಇತರೆ ಸೌಕರ್ಯ ಉಡಾನ್ ಯೋಜನೆಯಡಿ ಕಲ್ಪಿಸುತ್ತಿದೆ.