ಐಜ್ವಾಲ್ (ಮಿಜೋರಾಂ): ಈಶಾನ್ಯ ರಾಜ್ಯ ಮಿಜೋರಾಂನ ಮುಖ್ಯಮಂತ್ರಿ ಜೋರಮ್‌ಥಂಗಾ ಇಂದು ನಡೆದ ಗ್ರಾಮ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಗೆ ಭಾಗವಹಿಸಿ, ಮತ ಚಲಾಯಿಸಿದರು.
ಈ ಕುರಿತು ಸಿಎಂ ಜೋರಮ್‌ಥಂಗಾ ಅವರು ಮತದಾನದಲ್ಲಿ ಭಾಗವಹಿಸದ ಫೋಟೋವನ್ನು ತಮ್ಮ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ "ನಾನು ಮಿಜೋರಾಂನ ಗ್ರಾಮ ಮತ್ತು ಸ್ಥಳೀಯ ಮಂಡಳಿಯ 2020ರ ಚುನಾಣೆಯಲ್ಲಿ ಭಾಗವಹಿಸಿ ಮತದಾನ ಮಾಡಿದ್ದೇನೆ. ಕೊರೊನಾ ಮಹಾಮಾರಿ ನಡುವೆಯೇ ಎಲ್ಲರೂ ತಮ್ಮ ಮತದಾನದ ಹಕ್ಕು ಚಲಾಯಿಸುತ್ತಿದ್ದಾರೆ. ಮತದಾರರಿಗೆ ಸುರಕ್ಷಿತ ವೇದಿಕೆ ಕಲ್ಪಿಸಿಕೊಟ್ಟ ಎಲ್ಲ ಚುನಾವಣಾ ಅಧಿಕಾರಿಗಳಿಗೆ ಮತ್ತು ಪ್ರತಿಯೊಬ್ಬರಿಗೂ ಧನ್ಯವಾದಗಳು" ಎಂದು ಟ್ವೀಟ್ ಮಾಡಿದ್ದಾರೆ.
ಆಗಸ್ಟ್ 5 ರಂದು 11 ಜಿಲ್ಲೆಗಳಲ್ಲಿ 9 ಗ್ರಾಮ ಸಭೆ ಮತ್ತು ಐಜ್ವಾಲ್ ಪುರಸಭೆ ಪ್ರದೇಶದ 70ಕ್ಕೂ ಹೆಚ್ಚು ಸ್ಥಳೀಯ ಮಂಡಳಿಗಳಿಗೆ ಚುನಾವಣೆ ಘೋಷಿಸಲಾಗಿತ್ತು. ರಾಜ್ಯದ ದಕ್ಷಿಣ ಭಾಗದಲ್ಲಿ ಮೂರು ಸ್ವಾಯತ್ತ ಜಿಲ್ಲಾ ಮಂಡಳಿ ಪ್ರದೇಶಗಳು ಮತ್ತು ಐಜ್ವಾಲ್ ಪುರಸಭೆಯ ವ್ಯಾಪ್ತಿಯಲ್ಲಿ 83 ಸ್ಥಳೀಯ ಮಂಡಳಿಗಳನ್ನು ಹೊರತುಪಡಿಸಿ 9 ಜಿಲ್ಲೆಗಳಲ್ಲಿ ಒಟ್ಟು 558 ಗ್ರಾಮ ಮಂಡಳಿಗಳಿವೆ.
ಇನ್ನು ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟುವ ಸಲುವಾಗಿ ರಾಜ್ಯ ಚುನಾವಣಾ ಆಯೋಗವು ಬುಧವಾರ ಕೆಲ ಗ್ರಾಮ ಮತ್ತು ಸ್ಥಳೀಯ ಮಂಡಳಿಗಳ ಚುನಾವಣೆಯನ್ನು ಮುಂದೂಡಲು ನಿರ್ಧರಿಸಿದೆ ಎಂದು ಮಾಹಿತಿ ಮತ್ತು ಸಾರ್ವಜನಿಕ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.