ಭೋಪಾಲ್: ಕಳೆದ ಕೆಲ ದಿನಗಳಿಂದ ನಾಪತ್ತೆಯಾಗಿ, ಬೆಂಗಳೂರಿನಲ್ಲಿ ಇದ್ದರು ಎನ್ನಲಾದ ಎಂಎಲ್ಎ ಬಿಸಾಹುಲಾಲ್ ಸಿಂಗ್ ಮಧ್ಯಪ್ರದೇಶಕ್ಕೆ ವಾಪಸ್ ಆಗಿದ್ದಾರೆ.
ತಾವು ಯಾಕೆ ಬೆಂಗಳೂರಿಗೆ ಹೋಗಿದ್ದೆ ಎಂಬ ವಿಚಾರವನ್ನೂ ಬಿಚ್ಚಿಟ್ಟಿದ್ದಾರೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಸಿಂಗ್, " ನಾನು ತೀರ್ಥಯಾತ್ರೆ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ದೇವಾಲಯಗಳಿಗೆ ಭೇಟಿ ನೀಡಿದ್ದೆ. ಐದು ಬಾರಿ ಶಾಸಕನಾದರೂ ತಮಗೆ ಮಂತ್ರಿ ಮಾಡದಿರುವ ಬಗ್ಗೆ ಅತೃಪ್ತಿ ಇದ್ದದ್ದು ನಿಜ. ಹಾಗಾಗೇ ನಾನು ದಕ್ಷಿಣ ಭಾರತದ ದೇವಾಲಯಗಳಿಗೆ ಭೇಟಿ ನೀಡಲು ಪ್ರವಾಸ ಕೈಗೊಂಡಿದ್ದೆ. ನನಗಿಂತ ಕಿರಿಯರಿಗೆ ಕ್ಯಾಬಿನೆಟ್ನಲ್ಲಿ ಸ್ಥಾನ ನೀಡಲಾಗಿದೆ. ಹಾಗಾದರೆ ನಾನು ಮಾಡಿದ ಪಾಪ ಆದರೂ ಏನು ಎಂದು ಪ್ರಶ್ನೆ ಮಾಡಿದ್ದಾರೆ.
ಕಳೆದೊಂದು ವಾರದಿಂದ ಮಧ್ಯಪ್ರದೇಶದಲ್ಲಿ ಕಮಲನಾಥ್ ಸರ್ಕಾರದ ವಿರುದ್ಧ ಕೆಲಶಾಸಕರು ಅಸಮಾಧಾನಗೊಂಡಿದ್ದಾರೆ. 7-8 ಶಾಸಕರು ಬೇರೆ ಬೇರೆ ಕಡೆ ವಾಸ್ತವ್ಯ ಹೂಡಿದ್ದರು. ಅದರಲ್ಲಿ ಕೆಲವರು ಈಗಾಗಲೇ ರಾಜ್ಯಕ್ಕೆ ಮರಳಿದ್ದಾರೆ ಕೂಡಾ. ಇನ್ನೂ ಕೆಲವರು ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಿದ್ದಾರೆ. ಅವರೆಲ್ಲ ಕೂಡಾ ಶೀಘ್ರವೇ ಭೋಪಾಲ್ಗೆ ಮರಳುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಇದೇ ವೇಳೆ ಮುಂದುವರೆದು ಮಾತನಾಡಿರುವ ಬಿಸಾಹುಲಾಲ್ ಸಿಂಗ್, ನಾನು ಕಳೆದ ನಲವತ್ತು ವರ್ಷಗಳಿಂದ ಕಾಂಗ್ರೆಸ್ನಲ್ಲಿದ್ದೇನೆ. ಸಿಎಂ ತಕ್ಷಣವೇ ಕ್ಷೇತ್ರಗಳಲ್ಲಿ ಆಗಬೇಕಾದ ಕೆಲಸಗಳನ್ನ ಮಾಡಲಾಗುವುದು ಹಾಗೂ ಬೇಡಿಕೆ ಈಡೇರಿಸುವ ಭರವಸೆ ಕೊಟ್ಟಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಅಸಮಾದಾನಿತರನ್ನ ಕರೆತರಲು ಪ್ರವಾಸೋದ್ಯಮ ಸಚಿವ ಸುರೇಂದ್ರ ಸಿಂಗ್ ಬಘೇಲಾ ಬೆಂಗಳೂರಿಗೆ ತೆರಳಿದ್ದರು. ಅವರು ಬೆಂಗಳೂರಿನಲ್ಲಿ ಬಿಡುಬಿಟ್ಟಿದ್ದ ಶಾಸಕರೊಂದಿಗೆ ಮಾತನಾಡಿ, ಸಿಂಗ್ ಅವರನ್ನ ವಾಪಸ್ ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ.