ಹೈದರಾಬಾದ್: ಹಥ್ರಾಸ್ ಅತ್ಯಾಚಾರ ಪ್ರಕರಣಕ್ಕೆ ಈಗಾಗಲೇ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಅನೇಕ ಅತ್ಯಾಚಾರದಂತಹ ಅಮಾನವೀಯ ಕೃತ್ಯಗಳು ಬೆಳಕಿಗೆ ಬರುತ್ತಿವೆ. ಇದೀಗ ಹೈದರಾಬಾದ್ನಲ್ಲೂ ಅಂತಹ ಕೃತ್ಯ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಅತ್ಯಾಚಾರದ ವೇಳೆ ವಿರೋಧ ವ್ಯಕ್ತಪಡಿಸಿದ್ದಕ್ಕಾಗಿ 13 ವರ್ಷದ ಬಾಲಕಿ ಮೇಲೆ 26 ವರ್ಷದ ಕಾಮುಕ ವ್ಯಕ್ತಿಯೊಬ್ಬ ಬೆಂಕಿ ಸುರಿದು ಕೊಲೆ ಮಾಡುವ ಯತ್ನ ನಡೆಸಿದ್ದಾನೆ. ಕಳೆದ ತಿಂಗಳ ಸೆ.18ರಂದು ಖಮ್ಮಮ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ಇದೀಗ ಬೆಳಕಿಗೆ ಬಂದಿದೆ.
ಶೇ.70ರಷ್ಟು ಸುಟ್ಟು ಗಾಯಗೊಂಡಿರುವ ಬಾಲಕಿ ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ. ಈಗಾಗಲೇ ಆರೋಪಿ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಘಟನೆ ನಡೆದ ತಕ್ಷಣ ವೈದ್ಯರು, ಆಸ್ಪತ್ರೆ ಅಥವಾ ಕುಟುಂಬ ಈ ಪ್ರಕರಣದ ಬಗ್ಗೆ ಅಧಿಕಾರಿಗಳಿಗೆ ಏಕೆ ವರದಿ ಮಾಡಿಲ್ಲ ಎಂಬುದರ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾ ವೈದ್ಯಕೀಯ ಮತ್ತು ಆರೋಗ್ಯಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಸೆಪ್ಟೆಂಬರ್ 18ರಂದು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಬಂದ ವ್ಯಕ್ತಿ ಬಟ್ಟೆ ಹರಿದು ಹಾಕಿದ್ದು, ನಾನು ಪ್ರತಿರೋಧ ವ್ಯಕ್ತಪಡಿಸಿದಾಗ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ತಿಳಿಸಿದ್ದಾಳೆ. ಇನ್ನು ಆರೋಪಿ ಅಪಘಾತದ ವೇಳೆ ಬಾಲಕಿಗೆ ಸುಟ್ಟು ಗಾಯಗೊಂಡಿದ್ದಾಳೆ ಎಂದು ಸುಳ್ಳು ಹೇಳಿದ್ದಾಗಿ ತಿಳಿದು ಬಂದಿದೆ.