ನವದೆಹಲಿ: ಚೀನಾದ ದೈತ್ಯ ಶಿಯೋಮಿ ಕಂಪೆನಿಯ ಹೊಡೆತದಿಂದ ಮೂಲೆಗುಂಪಾಗಿದ್ದ ದೇಶೀಯ ಹ್ಯಾಂಡ್ಸೆಟ್ಗಳ ತಯಾರಕ ಕಂಪೆನಿ ಮೈಕ್ರೋಮ್ಯಾಕ್ಸ್ ತನ್ನ ಹೊಸ 'ಇನ್' ಸಬ್ ಬ್ರಾಂಡ್‌ಗಾಗಿ 500 ಕೋಟಿ ರೂ.ಗಳ ಹೂಡಿಕೆ ನಡೆಸಿದೆ. ಇದು ಭಾರತದ ಮಾರುಕಟ್ಟೆಗೆ ಮೈಕ್ರೋಮ್ಯಾಕ್ಸ್ ಪುನರಾಗಮನ ಮಾಡುತ್ತಿರುವಂತೆ ಕಾಣುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿದ ಮೈಕ್ರೋಮ್ಯಾಕ್ಸ್ ಸಹ ಸಂಸ್ಥಾಪಕ ರಾಹುಲ್ ಶರ್ಮಾ, ಭಾರತೀಯ ಕಂಪೆನಿಗಳು ತಯಾರಿಸಿದ ಸ್ಮಾರ್ಟ್‌ಫೋನ್‌ಗಳಿಗೆ ಭಾರಿ ಬೇಡಿಕೆಯಿದೆ ಮತ್ತು ಇತ್ತೀಚಿನ ಇಂಡೋ-ಚೀನಾ ಉದ್ವಿಗ್ನ ಪರಿಸ್ಥಿತಿ ನಂತರ ಇದು ಹೆಚ್ಚಿನ ಬೇಡಿಕೆ ಗಳಿಸಿದೆ. ಆದರೆ ನಮ್ಮ ಹೊಸ 'ಇನ್' ಬ್ರಾಂಡ್ ಕೇವಲ ಈ ಪರಿಸ್ಥಿತಿಯನ್ನು ಬಳಸಿಕೊಂಡು ಹಣ ಗಳಿಸುವ ಉದ್ದೇಶ ಹೊಂದಿಲ್ಲ. ನಾವು ಸಂಪೂರ್ಣ ಕಾರ್ಯತಂತ್ರದೊಂದಿಗೆ ಗ್ರಾಹಕರಿಗೆ ವೈಶಿಷ್ಟ್ಯಭರಿತ ಉತ್ಪನ್ನಗಳನ್ನು ನೀಡಲು ಬಯಸಿದ್ದೇವೆ. ಮುಂದಿನ 12 ರಿಂದ 18 ತಿಂಗಳುಗಳಲ್ಲಿ ಉತ್ಪಾದನೆ ಮತ್ತು ಮಾರ್ಕೆಟಿಂಗ್ಗಾಗಿ 500 ಕೋಟಿ ರೂಪಾಯಿಯನ್ನು ಹೂಡಿಕೆ ಮಾಡುತ್ತಿದ್ದೇವೆ ಎಂದು ಹೇಳಿದ್ರು.
ಒಂದು ಕಾಲದಲ್ಲಿ ಭಾರತದ ಮಾರುಕಟ್ಟೆಯ ನಾಯಕನಾಗಿದ್ದ ಮೈಕ್ರೋಮ್ಯಾಕ್ಸ್, ಶಿಯೋಮಿ, ಒಪ್ಪೋ ಮತ್ತು ವಿವೊದಂತಹ ಚೀನಾದ ಕಂಪೆನಿಗಳಿಂದ ತನ್ನ ಸ್ಥಾನವನ್ನು ಕಳೆದುಕೊಂಡಿತು. ಈ ಚೀನೀ ದೈತ್ಯರು ತಮ್ಮ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳು ಮತ್ತು ಬೃಹತ್ ಮಾರುಕಟ್ಟೆ ವೆಚ್ಚದಿಂದ ಭಾರತೀಯ ಮಾರುಕಟ್ಟೆಯನ್ನು ವಶಪಡಿಸಿಕೊಂಡರು.
ಕೋವಿಡ್-19 ಮತ್ತು ಚೀನಾ ವಿರೋಧಿ ಮನೋಭಾವದಿಂದಾಗಿ ಭಾರತದಲ್ಲಿ ಚೀನಾದ ಸ್ಮಾರ್ಟ್‌ಫೋನ್ ಬ್ರಾಂಡ್‌ಗಳ ಮಾರುಕಟ್ಟೆ ಪಾಲು, ಜೂನ್ 2020 ರ ತ್ರೈಮಾಸಿಕದಲ್ಲಿ ಶೇ. 72 ಕ್ಕೆ ಇಳಿದಿದೆ. ಇದು ಹೊಸ ಬ್ರಾಂಡ್ ಅನ್ನು ತರುವ ಈ ನಮ್ಮ ನಿರ್ಧಾರದಲ್ಲಿ ಮುಖ್ಯ ಪಾತ್ರವಹಿಸಿದೆ ಎಂದು ಶರ್ಮಾ ವಿವರಿಸಿದರು.
ಕಳೆದ ಕೆಲವು ವರ್ಷಗಳಿಂದ ಮಾರುಕಟ್ಟೆ ವಿಕಸನಗೊಂಡಿದೆ ಮತ್ತು ಸಾವಿರ ವರ್ಷಗಳಷ್ಟು ಬೇಡಿಕೆಗಳನ್ನು ಪೂರೈಸಬಲ್ಲ ಸಾಧನಗಳನ್ನು ತರುವಲ್ಲಿ ಕಂಪೆನಿಯು ಕಾರ್ಯನಿರತವಾಗಿದೆ. ಮುಂದಿನ ಐದು ವರ್ಷಗಳಲ್ಲಿ 10.5 ಲಕ್ಷ ಕೋಟಿ ರೂ.ಗಳ ಮೊಬೈಲ್ ಫೋನ್ ತಯಾರಿಸಲು ಪ್ರೊಡಕ್ಷನ್ ಲಿಂಕ್ಡ್ ಪ್ರೋತ್ಸಾಹಕ (ಪಿಎಲ್ಐ) ಯೋಜನೆಯಡಿ 11,000 ಕೋಟಿ ರೂ.ಗಳ ಹೂಡಿಕೆ ಮಾಡುವ ದೇಶೀಯ ಮತ್ತು ಅಂತಾರಾಷ್ಟ್ರೀಯ ಕಂಪನಿಗಳಿಂದ 16 ಪ್ರಸ್ತಾಪಗಳನ್ನು ಈ ತಿಂಗಳ ಆರಂಭದಲ್ಲಿ ಸರ್ಕಾರ ಒಪ್ಪಿಕೊಂಡಿತ್ತು.
ಭಾರತ ತಯಾರಿಸಿದ ಮೊಬೈಲ್ ಫೋನ್‌ಗಳೊಂದಿಗೆ ಭಾರತವನ್ನು ಮತ್ತೆ ಜಾಗತಿಕ ಸ್ಮಾರ್ಟ್‌ಫೋನ್ ನಕ್ಷೆಯಲ್ಲಿ ತರುವ ಪ್ರಯತ್ನ ಮಾಡುತ್ತಿದ್ದೇವೆ. ನಾವು ಹೊರತರುವ ಸ್ಮಾರ್ಟ್‌ಫೋನ್‌ಗಳ ಬೆಲೆ 7,000-20,000 ರೂಗಳ ಒಳಗೆ ಇರುತ್ತದೆ. ನಾವು ಉತ್ತಮ ಕಾರ್ಯಕ್ಷಮತೆಯ ಫೋನ್‌ಗಳು ಮತ್ತು ಗೇಮ್‌ಗಳನ್ನು ಆಡಲು ಅನುಕೂಲವಾಗುವ ಫೋನ್ಗಳ ತಯಾರಿಕೆಯತ್ತ ಗಮನ ಹರಿಸುತ್ತಿದ್ದೇವೆ ಎಂದು ತಿಳಿಸಿದ್ರು. 'ಇನ್' ಬ್ರಾಂಡ್ ಫೋನ್‌ಗಳನ್ನು ಕಂಪನಿಯ ತಯಾರಿಕಾ ಕೇಂದ್ರಗಳಾದ ಭಿವಾಡಿ ಮತ್ತು ಹೈದರಾಬಾದ್‌ಗಳಲ್ಲಿ ತಯಾರಿಸಲಾಗುವುದು. ಇವುಗಳು ತಿಂಗಳಿಗೆ 2 ಮಿಲಿಯನ್ ಯುನಿಟ್ ತಯಾರಿಸುವ ಸಾಮರ್ಥ್ಯವನ್ನು ಹೊಂದಿವೆ. ಮೈಕ್ರೋಮ್ಯಾಕ್ಸ್ ತನ್ನ ಚಿಲ್ಲರೆ ಮತ್ತು ವಿತರಣಾ ಜಾಲವನ್ನು ಬಲಪಡಿಸುವ ಕೆಲಸವನ್ನೂ ಮಾಡುತ್ತಿದೆ. ಇದು ಪ್ರಸ್ತುತ ಭಾರತದಾದ್ಯಂತ 10,000 ಮಳಿಗೆಗಳು ಮತ್ತು 1,000 ಕ್ಕೂ ಹೆಚ್ಚು ಸೇವಾ ಕೇಂದ್ರಗಳ ಚಿಲ್ಲರೆ ವ್ಯಾಪಾರವನ್ನು ಹೊಂದಿದೆ. ಹಬ್ಬದ ಸಮಯಕ್ಕೆ 'ಇನ್' ಬ್ರಾಂಡ್ ಫೋನ್ ಗಳು ಲಭ್ಯವಿರುತ್ತದೆ ಎಂದು ಹೇಳಿದರು.
ನಾವು ಫೋನ್ಗಳ ಕಾರ್ಯಕ್ಷಮತೆಯೊಂದಿಗೆ ರಾಜಿಯಾಗದೇ, ಬಳಕೆದಾರರಿಗೆ ಉತ್ತಮ ಅನುಭವವನ್ನು ನೀಡುವ ಫೋನ್‌ಗಳನ್ನು ನೀಡಲು ಬಯಸುತ್ತೇವೆ ಎಂದು ರಾಹುಲ್ ಶರ್ಮಾ ಹೇಳಿದ್ರು.