ನವದೆಹಲಿ : ನಗರದ ಮೂರು ಪಾಲಿಕೆಗಳು ಹಣ ಮತ್ತು ಸ್ವಚ್ಚತಾ ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿವೆ.
ಮಾರ್ಚ್ 24 ರ ಮಧ್ಯರಾತ್ರಿ ಲಾಕ್ ಡೌನ್ ಹೇರಿದಾಗಿನಿಂದ ಹೆಚ್ಚಿನ ಪೌರ ಕಾರ್ಮಿಕರು ಕೆಲಸಕ್ಕೆ ರಜೆ ಹಾಕಿದ್ದಾರೆ. ಇನ್ನು ನಗರದ ಪ್ರದೇಶದಲ್ಲೇ ಮನೆ ಮಾಡಿರುವವರು ಕೊರೊನಾ ಭೀತಿಯಿಂದ ಹೊರ ಬರಲು ಹೆದರುತ್ತಿದ್ದಾರೆ. ಹೀಗಾಗಿ, ಉತ್ತರ, ದಕ್ಷಿಣ ಮತ್ತು ಪೂರ್ವ ದೆಹಲಿಯ ಪಾಲಿಕೆಗಳು ಸ್ವಚ್ಛತಾ ಸಿಬ್ಬಂದಿ ಕೊರತೆ ಎದುರಿಸುತ್ತಿದ್ದು,ಸದ್ಯ ಇರುವ ಕಾರ್ಮಿಕರಿಂದಲೇ ಎಲ್ಲಾ ಕೆಲಸ ಮಾಡಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ರಾಜ್ಯ ಸರ್ಕಾರವು ನಮಗೆ ಸುಮಾರು 8,000 ಕೋಟಿ ರೂ. ಕೊಡಲು ಬಾಕಿ ಇದೆ, ಅವೆಲ್ಲವನ್ನು ಒಮ್ಮೆಲೆ ಪಾವತಿಸಿದರೆ, ನಾವು ಪೂರ್ಣ ಶಕ್ತಿಯೊಂದಿಗೆ ಕಾರ್ಯನಿರ್ವಹಿಸಬಹುದು. ಕೊನೆಪಕ್ಷ 500 ಕೋಟಿ ರೂ. ಪಾವತಿಸಿದರೂ, ಸುರಕ್ಷತೆ ಮತ್ತು ನೈರ್ಮಲ್ಯ ಉದ್ದೇಶಗಳಿಗಾಗಿ ನಾವು ಬೇಕಾದ ಸಲಕರಣೆಗಳನ್ನು ಮತ್ತು ಸಿಬ್ಬಂದಿಯನ್ನು ಪಡೆಯಬಹುದು. ಆರೋಗ್ಯ ಕ್ಷೇತ್ರಕ್ಕೆ ನಿಗದಿಪಡಿಸಿದ ಹಣವನ್ನು ನಾವು ಬಳಸಿಕೊಂಡಿದ್ದೇವೆ. ಆ ಹಣದಿಂದ ಆರೋಗ್ಯ ಸಿಬ್ಬಂದಿಗೆ ಪಿಪಿಇ ಕಿಟ್, ಗ್ಲೌಸ್ ಮತ್ತು ಮಾಸ್ಕ್ ನೀಡಿದ್ದೇವೆ ಎಂದು ಇಡಿಎಂಸಿ ಮೇಯರ್ ಅಂಜು ಕಮಲ್ ಕಾಂತ್ ತಿಳಿಸಿದ್ದಾರೆ.
ಉತ್ತರ ದೆಹಲಿ ಪಾಲಿಕೆಯ ಮೇಯರ್ ಅವತಾರ್ ಸಿಂಗ್ ಕೂಡ ಇದೇ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರ ಇನ್ನೂ 1,000 ಕೋಟಿ ರೂ. ನೀಡಲು ಬಾಕಿಯಿದೆ. ಹೀಗಾಗಿ ಪೌರ ಕಾರ್ಮಿಕರಿಗೆ 2 ತಿಂಗಳ ಸಂಬಳ ನೀಡಿಲ್ಲ. ನಾನು ಪೌರ ಕಾರ್ಮಿಕರಿಗೆ ಧನ್ಯವಾದ ಬಯಸುತ್ತೇನೆ. ಆದರೆ, ದುರದೃಷ್ಟವಶಾತ್ ಅವರಿಗೆ ಎರಡು ತಿಂಗಳ ಸಂಬಲ ನೀಡಿಲ್ಲ. ಆದರೂ ನಾವು ನಗರದ ನೈರ್ಮಲ್ಯ ಕಾಪಾಡಲು ಎಲ್ಲಾ ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ.