ಘಾಝಿಪುರ(ಉತ್ತರ ಪ್ರದೇಶ): ಮೇ 3 ರಂದು ಜಮ್ಮು ಕಾಶ್ಮೀರದ ಹಂದ್ವಾರದಲ್ಲಿ ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಹುತಾತ್ಮರಾದ ಭಾರತೀಯ ಸೇನೆಯ ವೀರಯೋಧ ಅಶ್ವಿನ್ ಕುಮಾರ್ ಯಾದವ್ ಸ್ವಗ್ರಾಮ ದು:ಖ ಸಾಗರದಲ್ಲಿ ಮುಳುಗಿದೆ.
ಕೊನೆಯ ಬಾರಿ ತನ್ನ ಪತ್ನಿ ಆಶಾ ದೇವಿಗೆ ಕರೆ ಮಾಡಿದ್ದ ಸಿಆರ್ಪಿಎಫ್ ಜವಾನ, "ಕೆಲಸ ಮುಗಿದಿದೆ, ಸೇನಾ ಕ್ಯಾಂಪ್ಗೆ ತೆರಳುತ್ತಿದ್ದೇನೆ ಆಮೇಲೆ ಕರೆ ಮಾಡುವೆ" ಎಂದು ಹೇಳಿದ್ದರಂತೆ. ಇದಾಗಿ ಎರಡು ಗಂಟೆಗಳಲ್ಲಿ ಯೋಧನ ಸಾವಿನ ಸುದ್ದಿ ಕೇಳಿ ಬಂದಿದೆ.
ಮೃತ ಯೋಧ ತನ್ನ ಕುಟುಂಬ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದರು. ಕೊನೆಯದಾಗಿ ಪತ್ನಿಗೆ ಕರೆ ಮಾಡಿದ್ದಾಗ, "ನಾನು ಮನೆಗೆ ಬಂದು ಮಗಳಿಗೆ ಬೈಸಿಕಲ್ ಖರೀದಿಸಿ ಕೊಡುತ್ತೇನೆ. ಅವಳನ್ನು ವೈದ್ಯೆಯಾಗಿ ಮಾಡುತ್ತೇನೆ" ಎಂದು ಹಲವಾರು ಕನಸುಗಳನ್ನು ಬಿತ್ತಿದ್ದರಂತೆ. ಆದರೆ, ಇದಾದ ಕೆಲವೇ ಗಂಟೆಗಳಲ್ಲಿ ಯೋಧ ಭಯೋತ್ಪಾದಕರ ಗುಂಡಿಗೆ ಬಲಿಯಾಗಿದ್ದಾರೆ.
ಪತ್ನಿ, ನಾಲ್ಕು ವರ್ಷದ ಮಗ ಆದಿತ್ಯ, ಆರು ವರ್ಷದ ಮಗಳು ಆಯಿಷಾ, ತಾಯಿ ಲಾಲ್ಮುನಿ ಹಾಗೂ ಇಬ್ಬರು ಕಿರಿಯ ಸಹೋದರರಾದ ಅಂಜನಿ ಯಾದವ್ ಮತ್ತು ಮುಲಾಯಂ ಯಾದವ್ ಅವರನ್ನು ಅಶ್ವಿನ್ ಕುಮಾರ್ ಅಗಲಿದ್ದಾರೆ. ಯೋಧನ ಇಬ್ಬರು ಸಹೋದರರು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ.
ಉತ್ತರ ಪ್ರದೇಶದ ನೊನಹ್ರಾ ನಿವಾಸಿಯಾದ ಆಶ್ವಿನ್ ಕುಮಾರ್, 2005ರಲ್ಲಿ ಅಲಹಾಬಾದ್ನ ಫಾಫಾಮೌದಲ್ಲಿ ಸೇನೆ ಸೇರಿದ್ದರು.