ರತ್ನಗಿರಿ (ಮಹಾರಾಷ್ಟ್ರ): ಕೇಂದ್ರ ಸರ್ಕಾರವು 27 ವಿವಿಧ ಬಗೆಯ ಕೀಟನಾಶಕಗಳ ಮೇಲೆ ನಿಷೇಧ ಹೇರುವ ಪ್ರಸ್ತಾವನೆಯನ್ನು ಮುಂದಿಟ್ಟಿದ್ದು, ಈ ಕುರಿತಾಗಿ 45 ದಿನಗಳ ಒಳಗೆ ತಮ್ಮ ಸಲಹೆ ಸೂಚನೆಗಳನ್ನು ಸಲ್ಲಿಸಬೇಕೆಂದು ರಾಜ್ಯಗಳಿಗೆ ಸೂಚಿಸಿದೆ. ಆದರೆ ಕೇಂದ್ರದ ಈ ಪ್ರಸ್ತಾವನೆಗೆ ಮಹಾರಾಷ್ಟ್ರದ ಮಾವು ಬೆಳೆಗಾರರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ನಿಷೇಧ ಹೇರಲು ಪ್ರಸ್ತಾಪಿಸಲಾಗಿರುವ ಒಟ್ಟು 27 ಕೀಟನಾಶಕಗಳ ಪೈಕಿ 8 ರಿಂದ 10 ಬಗೆಯ ಕೀಟನಾಶಕಗಳನ್ನು ಈ ಮಾವು ಬೆಳೆಗಾರರು ವ್ಯಾಪಕವಾಗಿ ಬಳಸುತ್ತ ಬಂದಿದ್ದಾರೆ. ಹೀಗಾಗಿಯೇ ಈ ಕುರಿತು ರೈತರಲ್ಲಿ ಕೆಲಮಟ್ಟದ ಅಸಮಾಧಾನ ಮೂಡಿದೆ ಎನ್ನಲಾಗಿದೆ.
ಈಗ ಬಳಸಲಾಗುತ್ತಿರುವ ಕೀಟನಾಶಕಗಳು ಕಡಿಮೆ ಬೆಲೆಯಲ್ಲಿ ರೈತರಿಗೆ ಸಿಗುತ್ತಿವೆ. ಒಂದು ವೇಳೆ ಇವನ್ನು ನಿಷೇಧ ಮಾಡಿದಲ್ಲಿ ದುಬಾರಿ ಬೆಲೆಯ ಕೀಟನಾಶಕಗಳನ್ನು ಅನಿವಾರ್ಯವಾಗಿ ಕೊಳ್ಳಬೇಕಾಗುತ್ತದೆ. ಇದರಿಂದ ಮಾವು ಕೃಷಿಯ ವೆಚ್ಚ ಗಣನೀಯವಾಗಿ ಹೆಚ್ಚಾಗಬಹುದು ಎಂಬ ಅಳುಕು ವ್ಯಕ್ತವಾಗುತ್ತಿದೆ.
ಕೀಟನಾಶಕ ನಿಷೇಧಿಸುವ ಕೇಂದ್ರದ ನಿರ್ಧಾರಕ್ಕೆ ಎಲ್ಲ ರೈತರು ವಿರೋಧ ವ್ಯಕ್ತಪಡಿಸುತ್ತಿಲ್ಲ ಎಂಬುದು ಸಹ ಗಮನಾರ್ಹವಾಗಿದೆ. ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವ ಕೀಟನಾಶಕಗಳನ್ನು ನಿಷೇಧಿಸುವ ಕೇಂದ್ರದ ನಿರ್ಧಾರಕ್ಕೆ ರೈತರ ಒಂದು ವರ್ಗವು ಬೆಂಬಲ ವ್ಯಕ್ತಪಡಿಸಿದೆ.
ಸದ್ಯ ಮಾವು ಬೆಳೆಗಾರರು ಬಳಸುತ್ತಿರುವ ಸ್ಥಳೀಯ ಕೀಟನಾಶಕಗಳು ಮತ್ತು ಅವುಗಳ ಬೆಲೆ ಹೀಗಿವೆ:
- ಕ್ವಿನಾಲ್ಫಾಸ್: ಮಾವು ಬೆಳೆಯ ಕೀಟಾಣು ನಿಯಂತ್ರಣಕ್ಕೆ ಬಳಸಲಾಗುತ್ತದೆ. ಲೀಟರ್ಗೆ 400 ರೂ. ಬೆಲೆ ಇದೆ.
- ಕಾರ್ಬೆಂಡಾಜಿಮ್ ಪೌಡರ್: ಮಾವು ಗಿಡಗಳ ಮೇಲೆ ಫಂಗಸ್ ಬೆಳೆಯುವುದನ್ನು ತಡೆಯಲು ಬಳಸಲಾಗುತ್ತದೆ. ಕೆಜಿ ಗೆ 500 ರೂ. ದರವಿದೆ.
- ಕ್ಲೋರ್ಪೈರಿಫಾಸ್: ಗಿಡ ಒಣಗಿಸುವ ಕೀಟ ನಿಯಂತ್ರಣಕ್ಕೆ ಬಳಸಲಾಗುತ್ತದೆ. ಲೀಟರ್ಗೆ 400 ರೂ. ಬೆಲೆ ಇದೆ.
- ಫೆನಾಕುಕಾರ್ಬ್: ಮಾವಿನ ಗಿಡದ ರೋಗ ನಿಯಂತ್ರಣಕ್ಕೆ ಬಳಸಲಾಗುತ್ತದೆ. ಲೀಟರ್ಗೆ 550 ರೂ. ಬೆಲೆ ಇದೆ.
- ಡೆಲ್ಟಾಮೆಥ್ರಿನ್: ಕೀಟ ನಿಯಂತ್ರಣಕ್ಕೆ ಬಳಸಲಾಗುತ್ತದೆ. ಲೀಟರ್ಗೆ 600 ರೂ. ಬೆಲೆ ಇದೆ.
"ಕಳೆದ ಹಲವಾರು ವರ್ಷಗಳಿಂದ ಈ ಭಾಗದ ಮಾವು ಬೆಳೆಗಾರರು ಈ ಕೀಟನಾಶಕಗಳನ್ನು ಉಪಯೋಗಿಸುತ್ತಿದ್ದು, ಉತ್ತಮ ಫಲಿತಾಂಶ ಪಡೆಯುತ್ತಿದ್ದಾರೆ. ಹೀಗಾಗಿ ಈ ಕೀಟನಾಶಕಗಳಿಗೆ ಭಾರಿ ಬೇಡಿಕೆ ಇದೆ. ಒಂದೊಮ್ಮೆ ಇವನ್ನು ಬ್ಯಾನ್ ಮಾಡಿದಲ್ಲಿ ರೈತರು ಲೀಟರ್ಗೆ 2 ಸಾವಿರದಿಂದ 3 ಸಾವಿರ ರೂ. ಬೆಲೆಯ ದುಬಾರಿ ಕೀಟನಾಶಕಗಳನ್ನು ಖರೀದಿಸಬೇಕಾಗುತ್ತದೆ." ಎನ್ನುತ್ತಾರೆ ಮೊಹಿಂದರ್ ಬಾಮಣೆ. ಕೊಂಕಣ ಭಾಗದಲ್ಲಿ ಪ್ರಖ್ಯಾತ ಕೀಟನಾಶಕ ಮತ್ತು ಗೊಬ್ಬರ ಕಂಪನಿ ನಂದಾಯಿ ಅಗ್ರೊಶಾಪ್ನ ಮಾಲೀಕರಿವರು.
"ಪ್ರಸ್ತುತ ರೈತರು ಬಳಸುತ್ತಿರುವ ಕೆಲ ಕೀಟನಾಶಕಗಳು ಬಹುಕಾಲದವರೆಗೆ ನೀರು ಹಾಗೂ ಮಣ್ಣಿನಲ್ಲಿ ಉಳಿದುಕೊಳ್ಳುತ್ತವೆ. ಹೀಗಾಗಿ ಇಂಥ ಕೀಟನಾಶಕಗಳನ್ನು ಬ್ಯಾನ್ ಮಾಡಲು ರೈತರು ವಿರೋಧಿಸಕೂಡದು" ಎನ್ನುತ್ತಾರೆ ಮಾವಿನ ತೋಟದ ಮಾಲೀಕ ಪ್ರಸನ್ನ ಪೇಠೆ.
ಪರಿಣಾಮಕಾರಿಯಾಗಿ ಕೀಟನಾಶಕ ಸಿಂಪಡಣೆಗಾಗಿ ಮಾವು ತೋಟದ ಮಾಲೀಕರು 100 ಮರಗಳಿಗಾಗಿ 2.25 ಲಕ್ಷ ರೂ.ಗಳಿಂದ 2.50 ಲಕ್ಷ ರೂ.ಗಳವರೆಗೆ ರೈತರಿಗೆ ಸಂದಾಯ ಮಾಡುತ್ತಿದ್ದಾರೆ. ಇನ್ನು ಕೆಲ ರೈತರು 1 ರಿಂದ 1.5 ಲಕ್ಷ ರೂ.ಗಳಲ್ಲೇ ಈ ಕೆಲಸವನ್ನು ಮುಗಿಸುತ್ತಾರೆ. ಆದರೆ ಕೀಟನಾಶಕ ಪರಿಣಾಮಕಾರಿ ಇದ್ದಷ್ಟೂ ಉತ್ತಮ ಹಾಗೂ ಗುಣಮಟ್ಟದ ಫಸಲು ಕೈಗೆ ಸಿಗುತ್ತದೆ. ಒಂದು ವೇಳೆ ಕೀಟನಾಶಕವನ್ನೇ ಬಳಸದಿದ್ದಲ್ಲಿ ಮಾವಿನ ಫಸಲು ಅರ್ಧಕ್ಕರ್ಧ ಕಡಿಮೆಯಾಗಲಿದೆ.
ಮಾವಿನ ರಫ್ತಿಗೆ ಮುಂಬೈ ಪ್ರಮುಖ ಕೇಂದ್ರ ಸ್ಥಾನವಾಗಿದೆ. ಪ್ರತಿವರ್ಷ 38,000 ದಿಂದ 40,000 ಮೆಟ್ರಿಕ್ ಟನ್ಗಳಷ್ಟು ಮಾವಿನ ಹಣ್ಣುಗಳನ್ನು ಭಾರತ ವಿದೇಶಕ್ಕೆ ರಫ್ತು ಮಾಡುತ್ತದೆ. ಇದರಲ್ಲಿ ಅಲ್ಫೊನ್ಸೊ ತಳಿಯ ಪಾಲು ಶೇ 15 ರಿಂದ 20 ರಷ್ಟಿದೆ. ಅಂದರೆ ಸುಮಾರು 7 ರಿಂದ 8 ಸಾವಿರ ಮೆಟ್ರಿಕ್ ಟನ್ಗಳಷ್ಟು ಅಲ್ಫೊನ್ಸೊ ತಳಿಯ ಹಣ್ಣುಗಳನ್ನು ಭಾರತ ರಫ್ತು ಮಾಡುತ್ತಿದೆ.
ಮಧ್ಯ ಪ್ರಾಚ್ಯ ದೇಶಗಳು ಹಾಗೂ ಇಂಗ್ಲೆಂಡ್, ಯುರೋಪ್, ಅಮೆರಿಕ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಕೊರಿಯಾ, ಜಪಾನ್ ಮುಂತಾದ ದೇಶಗಳಿಗೆ ಪ್ರಮುಖವಾಗಿ ಮಾವು ರಫ್ತು ಮಾಡಲಾಗುತ್ತದೆ ಎಂದು ಮಹಾರಾಷ್ಟ್ರ ರಾಜ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಕೊಂಕಣ ವಿಭಾಗ) ಡೆಪ್ಯೂಟಿ ಜನರಲ್ ಮ್ಯಾನೇಜರ್ ಭಾಸ್ಕರ್ ಪಾಟೀಲ ಮಾಹಿತಿ ನೀಡಿದರು.
ಪ್ರಸಕ್ತ ವರ್ಷ ಕೊರೊನಾ ವೈರಸ್ ಬಿಕ್ಕಟ್ಟಿನಿಂದ ಮಾವು ರಫ್ತು ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮವಾಗಿದ್ದು, ವಿಮಾನದ ಮೂಲಕ ರಫ್ತಾಗಬೇಕಿದ್ದ ಎಲ್ಲ ರಫ್ತು ಚಟುವಟಿಕೆಗಳು ಸ್ಥಗಿತವಾಗಿವೆ. ಹೀಗಾಗಿ ಕೆಲ ಮಧ್ಯ ಪ್ರಾಚ್ಯ ದೇಶಗಳು ಹಾಗೂ ಯುರೋಪಿನ ಕೆಲ ದೇಶಗಳಿಗೆ ಮಾತ್ರ ಸಮುದ್ರ ಮಾರ್ಗದ ಮೂಲಕ ಮಾವು ಕಳುಹಿಸಲಾಗಿದೆ.
2019ರ ಏಪ್ರಿಲ್ 1 ರಿಂದ ಮೇ 19 ರ ಅವಧಿಯಲ್ಲಿ ಮಹಾರಾಷ್ಟ್ರದಿಂದ ಒಟ್ಟು 16,746 ಮೆಟ್ರಿಕ್ ಟನ್ ಮಾವು ರಫ್ತು ಮಾಡಲಾಗಿತ್ತು. ಆದರೆ 2020ರ ಏಪ್ರಿಲ್ 1 ರಿಂದ ಮೇ 19 ರ ಅವಧಿಯಲ್ಲಿ ಈ ರಫ್ತು ಪ್ರಮಾಣ 8,640 ಮೆಟ್ರಿಕ್ ಟನ್ ಮಾತ್ರ ಆಗಿದೆ. ಪ್ರಮುಖವಾಗಿ ಅಲ್ಫೊನ್ಸೊ ತಳಿಯ ಹಣ್ಣುಗಳನ್ನು ಹೆಚ್ಚಾಗಿ ರಫ್ತು ಮಾಡಲಾಗುತ್ತಿದೆ. ಇದರ ಜೊತೆಗೆ ಕೇಸರ್, ವೇಗನಪಲ್ಲಿ, ತೋತಾಪುರಿ, ಬಾದಾಮಿ ತಳಿಯ ಹಣ್ಣುಗಳಿಗೂ ವಿದೇಶಿ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಇದೆ. ಆದರೆ ಈ ಬಾರಿ ಬೇರೆ ರಾಜ್ಯದ ಹಣ್ಣುಗಳನ್ನು ಮುಂಬೈಗೆ ಸಾಗಿಸಲು ಸಾಧ್ಯವಾಗದ ಕಾರಣದಿಂದ ಹೆಚ್ಚಾಗಿ ಅಲ್ಫೊನ್ಸೊ ಹಣ್ಣುಗಳನ್ನು ಮಾತ್ರ ರಫ್ತು ಮಾಡಲಾಗಿದೆ.
ಲಾಕ್ಡೌನ್ ಕಾರಣದಿಂದ ಎಲ್ಲ ರಾಜ್ಯಗಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಬಂದ್ ಆಗಿದ್ದರಿಂದ ರಫ್ತುದಾರರಿಗೆ ಬೇರೆ ರಾಜ್ಯಗಳ ಹಣ್ಣುಗಳನ್ನು ತರಿಸುವುದು ಈ ಬಾರಿ ಸಾಧ್ಯವಾಗಿಲ್ಲ. ಹೀಗಾಗಿ ಮುಂಬೈನಿಂದ ಅಲ್ಫೊನ್ಸೊ ಮಾವನ್ನೇ ಹೆಚ್ಚು ಪ್ರಮಾಣದಲ್ಲಿ ಸಮುದ್ರ ಮಾರ್ಗದ ಮೂಲಕ ಮಧ್ಯಪ್ರಾಚ್ಯ ಹಾಗೂ ಯುರೋಪಿನ ದೇಶಗಳಿಗೆ ಕಳುಹಿಸಲಾಗಿದೆ ಎಂದು ಭಾಸ್ಕರ್ ಪಾಟೀಲ ಹೇಳಿದರು.