ಕೋವಿಡ್ 19 ದೇಶದ ಪ್ರತಿಯೊಬ್ಬರ ಮೇಲೂ ಒಂದಲ್ಲ ಒಂದು ರೀತಿಯಲ್ಲಿ ಬಾಧಿಸಿದೆ. ಅದರಲ್ಲೂ ಡಯಾಬಿಟೀಸ್ ಇರುವವರಿಗೆ ಇದು ಹೆಚ್ಚೇ ಬಾಧಿಸಿದೆ. ಭಾರತದಲ್ಲಿ 7 ಕೋಟಿ ಡಯಾಬಿಟೀಸ್ ಹೊಂದಿರುವ ಜನರಿದ್ದಾರೆ. ಭಾರತದಲ್ಲಿ ಒಂದು ಕುಟುಂಬದಲ್ಲಿ ಸರಾಸರಿ 5 ಜನರು ಇದ್ದಾರೆ ಎಂದು ನಾವು ಭಾವಿಸಿದರೆ, 350 ಮಿಲಿಯನ್ ಜನರು ನೇರವಾಗಿ ಅಥವಾ ಪರೋಕ್ಷವಾಗಿ ಡಯಾಬಿಟೀಸ್ ಸಮಸ್ಯೆಯಿಂದ ಬಾಧಿತರಾಗಿದ್ದಾರೆ ಎಂದು ನಾವು ಭಾವಿಸಬಹುದು. ಡಯಾಬಿಟೀಸ್‌ಗೆ ಬಾಧಿಸುವ ಇತರ ಸಮಸ್ಯೆಗಳ ಪೈಕಿ, ಒತ್ತಡ ಮತ್ತು ಉದ್ವೇಗವೂ ಕೂಡ ಜನರಿಗೆ ತುಂಬಾ ತೊಂದರೆಯನ್ನು ಮಾಡುತ್ತಿವೆ.
ದೇಶದಲ್ಲಿನ ಎಲ್ಲ ವ್ಯಕ್ತಿಗಳಿಗೆ ಹೋಲಿಸಿದರೆ ಕೊರೊನಾವೈರಸ್‌ನಿಂದ ಬಾಧಿತವಾಗುವ ಸಾಧ್ಯತೆ ಡಯಾಬಿಟೀಸ್ ಹೊಂದಿರುವ ವ್ಯಕ್ತಿಗಳಿಗೂ ಇರುತ್ತದೆ. ಆದರೆ, ಡಯಾಬಿಟೀಸ್ ಹೊಂದಿರುವ ಜನರಿಗೆ ಕೋವಿಡ್19 ರೋಗ ಕಾಣಿಸಿಕೊಂಡಲ್ಲಿ, ಗಂಭೀರ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಯಾಕೆಂದರೆ, ಡಯಾಬಿಟೀಸ್ ಹೊಂದಿರುವವರಲ್ಲಿ ಕೊರೊನಾ ವೈರಸ್‌ನ ಗುಣಲಕ್ಷಣಗಳು ಮತ್ತು ಸಂಕೀರ್ಣತೆಗಳು ಅತ್ಯಂತ ಹೆಚ್ಚಿರುತ್ತದೆ. ಈ ಸನ್ನಿವೇಶ ಈಗಾಗಲೇ ಇತರ ದೇಶಗಳಲ್ಲೂ ಕಂಡುಬಂದಿದೆ. ಡಯಾಬಿಟೀಸ್ ಹೊಂದಿರುವ ಜನರಲ್ಲಿ ಗಂಭೀರ ಸಮಸ್ಯೆ ಉಂಟಾಗುವ ರಿಸ್ಕ್ ಹೆಚ್ಚಿರುತ್ತದೆ ಮತ್ತು ಡಯಾಬಿಟೀಸ್ ಇದ್ದು, 60 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ಈ ರಿಸ್ಕ್ ಇನ್ನೂ ಹೆಚ್ಚಿರುತ್ತದೆ.
ಡಯಾಬಿಟೀಸ್ ಹೊಂದಿರುವ ವ್ಯಕ್ತಿಗೆ ಕೊರೊನಾವೈರಸ್ ಕಂಡುಬಂದಲ್ಲಿ, ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ವೈರಸ್ ಸೋಂಕಿನ ವಿರುದ್ದ ಹೋರಾಡಲು ವ್ಯಕ್ತಿಯ ದೇಹ ವಿಪರೀತ ಶ್ರಮಿಸುತ್ತದೆ. ಇದರಿಂದಾಗಿ, ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚು ಕಡಿಮೆಯಾಗುತ್ತದೆ. ಡಯಾಬಿಟೀಸ್ ದೇಹದ ಎಲ್ಲ ಅಂಗಗಳ ಮೇಲೂ ಬಾಧಿಸುತ್ತದೆ. ನಿಯಂತ್ರಣ ಸರಿ ಇಲ್ಲದಿದ್ದರೆ ಕಣ್ಣು, ಕಾಲು, ಕಿಡ್ನಿ ಮತ್ತು ದೇಹದ ಇತರ ಭಾಗಗಳಿಗೂ ಬಾಧಿಸುತ್ತವೆ. ಹೀಗಾಗಿ, ಡಯಾಬಿಟೀಸ್ ಹೊಂದಿರುವವರು ಹೆಚ್ಚು ಎಚ್ಚರಿಕೆಯಿಂದ ಇರಬೇಕು ಮತ್ತು ಕೋವಿಡ್ 19 ತಡೆಗೆ ನೀಡಿದ ಸಲಹೆಗಳನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಅನುಸರಿಸಬೇಕು.
ಲಾಕ್‌ಡೌನ್ ಇರುವುದರಿಂದ ಡಯಾಬಿಟೀಸ್ ಹೊಂದಿರುವವರು ನಿತ್ಯವೂ ಮಾಡುತ್ತಿದ್ದ ವಾಕ್ ಮತ್ತು ವ್ಯಾಯಾಮವನ್ನು ಮಾಡಲು ಸಾಧ್ಯವಾಗುವುದಿಲ್ಲ. ಸಾಮಾನ್ಯವಾಗಿ ಈ ಕ್ರಮಗಳು ಅವರಿಗೆ ಡಯಾಬಿಟೀಸ್ ನಿಯಂತ್ರಣದಲ್ಲಿ ಸಹಾಯ ಮಾಡುತ್ತಿತ್ತು. ಆಹಾರ ಕ್ರಮವನ್ನು ನಿಯಂತ್ರಿಸುವುದು ಕೂಡ ಈ ಸಮಯದಲ್ಲಿ ಕಷ್ಟವಾಗುತ್ತದೆ. ಯಾಕೆಂದರೆ ಲಭ್ಯವಿರುವ ದಿನಸಿಯಲ್ಲೇ ತಮ್ಮ ಊಟೋಪಚಾರವನ್ನು ಪೂರೈಸಬೇಕಾಗುತ್ತದೆ. ಡಯಾಬಿಟೀಸ್ ಹೊಂದಿರುವ ಎಲ್ಲರೂ ನಿತ್ಯ ಔಷಧವನ್ನು ಸೇವಿಸಬೇಕಾಗುತ್ತದೆ. ಇದರ ಜೊತೆಗೆ ಇತರ ಡಯಾಬಿಟೀಸ್ ನಿರ್ವಹಣೆ ಕ್ರಮಗಳನ್ನೂ ಅವರು ಕೈಗೊಳ್ಳುತ್ತಿರುತ್ತಾರೆ. ಔಷಧದ ಸಂಗ್ರಹ ಕಡಿಮೆಯಾಗುತ್ತಿದ್ದರೆ ಜನರಿಗೆ ಆತಂಕ ಶುರುವಾಗುತ್ತದೆ. ಕೆಲವು ಬಾರಿ ಸ್ಥಳೀಯ ವೈದ್ಯರಲ್ಲಿ ಅವರು ಬಳಸುತ್ತಿದ್ದ ಸಾಮಾನ್ಯ ಬ್ರಾಂಡ್ ಕೂಡ ಸಿಗದೇ ಇರಬಹುದು.
ಡಯಾಬಿಟೀಸ್ ಹೊಂದಿರುವವರು ಏನು ಮಾಡಬೇಕು?
• ಮನೆಯಲ್ಲೇ ಇರಬೇಕು ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿ. 1-2 ಮೀಟರುಗಳ ದೈಹಿಕ ಅಂತರ ಕಾಯ್ದುಕೊಳ್ಳಿ. ನಿಮ್ಮನ್ನು ನೋಡಲು ಬರುವ ಯಾರೇ ಆದರೂ ಈ ಅಂತರವನ್ನು ಕಾಯ್ದುಕೊಳ್ಳುವಂತೆ ಎಚ್ಚರಿಕೆ ವಹಿಸಿ. ಔಷಧ ಅಥವಾ ದಿನಸಿಯನ್ನು ಖರೀದಿ ಮಾಡಬೇಕಾಗಿದ್ದರೆ ಕುಟುಂಬದ ಇತರ ಸದಸ್ಯರನ್ನು ಅಥವಾ ನೆರೆಯವರನ್ನು ಅಥವಾ ಭದ್ರತಾ ಸಿಬ್ಬಂದಿಯನ್ನು ಕಳುಹಿಸುವುದು ಉತ್ತಮ.
• ಡಯಾಬಿಟೀಸ್ ಹೊಂದಿರುವ ವ್ಯಕ್ತಿ ಮಾತ್ರವಲ್ಲ, ಮನೆಯಲ್ಲಿರುವ ಎಲ್ಲರೂ ನೈರ್ಮಲ್ಯ ನಿಯಮವನ್ನು ಮತ್ತು ಕೈತೊಳೆಯುವ ಪದ್ದತಿಯನ್ನು ಅನುಸರಿಸಬೇಕು.
• ಈ ಹಿಂದೆ ತೆಗೆದುಕೊಳ್ಳುತ್ತಿದ್ದ ಎಲ್ಲ ಔಷಧಗಳನ್ನು ಮುಂದುವರಿಸಬೇಕು. ಪರಿಸ್ಥಿತಿ ಬದಲಾಗಿದೆ ಎಂಬ ಕಾರಣಕ್ಕೆ ನೀವೇ ಔಷಧವನ್ನು ನಿಲ್ಲಿಸಬೇಡಿ ಅಥವಾ ಡೋಸೇಜ್ ಹೆಚ್ಚು ಕಡಿಮೆ ಮಾಡಬೇಡಿ. ನೀವು ಯಾವುದೇ ಇತರ ಔಷಧವನ್ನು ಅಂದರೆ, ಬಿಪಿ ಕಡಿಮೆ ಮಾಡುವ ಔಷಧಗಳು, ಆಸ್ಪಿರಿನ್ ಇತ್ಯಾದಿಯನ್ನು ತೆಗೆದುಕೊಳ್ಳುತ್ತಿದ್ದರೆ ಹಿಂದಿನಂತೆಯೇ ತೆಗೆದುಕೊಳ್ಳುವುದನ್ನು ಮುಂದುವರಿಸಿ.
• ನಿಮ್ಮ ಡಯಾಬಿಟೀಸ್ ಔಷಧಗಳ ಸಂಗ್ರಹವನ್ನು 3-4 ವಾರಗಳವರೆಗೆ ಸಾಲುವಷ್ಟು ಇಟ್ಟುಕೊಳ್ಳಿ. ಆಗ ನೀವು ಅಗತ್ಯ ಔಷಧಕ್ಕಾಗಿ ಔಷಧ ಅಂಗಡಿಗೆ ಪದೇ ಪದೆ ಹೋಗುವ ಅಗತ್ಯ ಇರುವುದಿಲ್ಲ.
• ನಿಮ್ಮ ಔಷಧ ಸಂಗ್ರಹದ ಮೇಲೆ ಗಮನವಿರಲಿ. ಒಂದು ವಾರಕ್ಕೆ ಸಾಲುವಷ್ಟು ಔಷಧ ಇಲ್ಲದಿದ್ದರೆ, ಔಷಧ ಖರೀದಿಗೆ ವ್ಯವಸ್ಥೆ ಮಾಡಿಕೊಳ್ಳಿ. ಲಾಕ್‌ಡೌನ್‌ನ ಅವಧಿಯಲ್ಲಿ ಇನ್ಸುಲಿನ್ ಅಥವಾ ಮೆಟ್‌ಫಾರ್ಮಿನ್‌ನ ನಿರ್ದಿಷ್ಟ ಬ್ರಾಂಡ್‌ಗಳು ಲಭ್ಯವಿಲ್ಲದೇ ಇರಬಹುದು. ನಿಮ್ಮ ಕೆಮಿಸ್ಟ್ ಬಳಿ ಮಾತನಾಡಿ ಮತ್ತು ಯಾವ ಪರ್ಯಾಯ ಲಭ್ಯವಿದೆ ಎಂದು ಕೇಳಿಕೊಳ್ಳಿ. ನಿಮ್ಮ ವೈದ್ಯರಿಗೆ ಕರೆ ಮಾಡಿ ಯಾವ ಪರ್ಯಾಯವನ್ನು ಬಳಸಬಹುದು ಎಂದು ಕೇಳಿ. ಬ್ರಾಂಡ್ ಬೇರೆ ಆಗಿದ್ದರೂ ನಿಮ್ಮ ಡಯಾಬಿಟೀಸ್ ನಿಯಂತ್ರಣದ ಔಷಧವನ್ನು ನಿಯತವಾಗಿ ತೆಗೆದುಕೊಳ್ಳುವುದು ಅಗತ್ಯವಾಗಿದೆ.
• ನಿಮ್ಮ ಆಹಾರವು ಮೊದಲಿನಂತೆಯೇ ಇರಬೇಕು. ದಿನಕ್ಕೆ ಮೂರು ಬಾರಿ ಆಹಾರ ಸೇವನೆ ಮಾಡುವುದರ ಬದಲಿಗೆ ಆಗಾಗ್ಗೆ ಸ್ವಲ್ಪ ಸ್ವಲ್ಪವೇ ಆಹಾರ ಸೇವನೆ ಮಾಡುವುದು ಉತ್ತಮ. ಹವಾಮಾನ ಬದಲಾಗುತ್ತಿದ್ದು, ಉಷ್ಣತೆ ಹೆಚ್ಚುತ್ತಿರುವುದರಿಂದ ಸಾಕಷ್ಟು ನೀರು ಕುಡಿಯಿರಿ.
• ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಮನೆಯಲ್ಲೇ ನೀವು ಪರಿಶೀಲಿಸುತ್ತಿದ್ದರೆ ಅದನ್ನು ಮುಂದುವರಿಸಿ. ನಿತ್ಯ ನೀವು ಮಾಡುತ್ತಿದ್ದ ಸಾಮಾನ್ಯ ದೈಹಿಕ ಚಟುವಟಿಕೆಯನ್ನು ಈಗ ನೀವು ಮಾಡದ್ದರಿಂದ ಇನ್ನಷ್ಟು ಪದೇ ಪದೇ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ತಪಾಸಣೆ ಮಾಡಿಕೊಳ್ಳಬೇಕು.
• ಸಕ್ಕರೆ ಪ್ರಮಾಣ ಹೆಚ್ಚಳವಾದ (ಹೈಪರ್‌ಗ್ಲೈಸೀಮಿಯಾ ಗುಣಲಕ್ಷಣದ ಮೇಲೆ ಗಮನವಿರಲಿ. ಸಾಮಾನ್ಯಕ್ಕಿಂತ ಹೆಚ್ಚು ಮೂತ್ರ ವಿಸರ್ಜನೆ (ವಿಶೇಷವಾಗಿ ರಾತ್ರಿಯಲ್ಲಿ), ತುಂಬಾ ನೀರಡಿಕೆಯಾಗುವುದು, ತಲೆನೋವು ಉಂಟಾಗುವುದು, ಸುಸ್ತು ಮತ್ತು ಆಲಸ್ಯ ಕಂಡುಬರಬಹುದು.
• ನಿಮ್ಮ ಸಾಮಾನ್ಯ ಡಯಾಬೆಟಿಕ್ ತಪಾಸಣೆ ಅಥವಾ ಯಾವುದೇ ಇತರ ಚಿಕಿತ್ಸೆಗೆ ನೀವು ಆಸ್ಪತ್ರೆ ಅಥವಾ ಕ್ಲಿನಿಕ್‌ಗೆ ಹೋಗಬಾರದು. ಸನ್ನಿವೇಶ ಸುರಕ್ಷಿತವಾಗುವವರೆಗೂ ನೀವು ನಿರೀಕ್ಷಿಸಬಹುದು.
• ಮನೆಯಲ್ಲೇ ಇದ್ದೀರಿ ಎಂದ ಮಾತ್ರಕ್ಕೆ ನೀವು ನಿಮ್ಮ ನಿತ್ಯದ ವ್ಯಾಯಾಮವನ್ನು ಬಿಟ್ಟುಬಿಡಬೇಕಿಲ್ಲ. ಸಂಜೆ ವಾಕ್ ಮಾಡಲು ನಿಮಗೆ ಹೊರಗೆ ಹೋಗಲು ಸಾಧ್ಯವಾಗದಿರಬಹುದು. ಆದರೆ, ಮನೆಯ ಒಳಗೇ ವಾಕ್ ಮಾಡಬಹುಉದ. ದಿನಕ್ಕೆ 4 ಬಾರಿ ಮನೆಯ ಒಳಗೇ 400-500 ಸ್ಟೆಪ್‌ಗಳನ್ನು ಹಾಕಿದರೆ, 1.5 ರಿಂದ 2.0 ಕಿ.ಮೀ ನಡೆದಂತಾಗುತ್ತದೆ. ದೇಹವನ್ನು ಸ್ಟ್ರೆಚ್ ಮತ್ತು ಬೆಂಡ್ ಮಾಡುವ ವ್ಯಾಯಾಮ ಮಾಡಬಹುದು. ದೀರ್ಘ ಸಮಯದವರೆಗೆ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳಬೇಡಿ. 45-60 ನಿಮಿಷ ಕುಳಿತ ನಂತರ ಎದ್ದು ನಡೆದಾಡಿ. ಕುಳಿತಲ್ಲೇ ನಿಮ್ಮ ಕೈಗಳು ಮತ್ತು ಕಾಲುಗಳನ್ನು ತಿರುಗಿಸುತ್ತಿರಿ.
• ಮಕ್ಕಳು, ಮೊಮ್ಮಕ್ಕಳು ಮತ್ತು ನಿಮ್ಮ ಸ್ನೇಹಿತರ ಜೊತೆಗೆ ಎಲ್ಲ ಸಾಮಾಜಿಕ ಚಟುವಟಿಕೆಗಳಲ್ಲೂ ಭಾಗವಹಿಸಿ. ಕಾರ್ಡ್ ಗೇಮ್ ಅಥವಾ ಬೋರ್ಡ್ ಗೇಮ್‌ಗಳಾದ ಕೇರಂ, ಲುಡೋ, ಹಾವು ಏಣಿ ಆಟ ಇತ್ಯಾದಿಯನ್ನು ಆಡಬಹುದು. ಹಳೆಯ ಕಥೆಗಳು ಮತ್ತು ಕುಟುಂಬದ ಸುದ್ದಿ ಸಮಾಚಾರಗಳು ಸೇರಿದಂತೆ ಯಾವುದೇ ಮನರಂಜನೆಯನ್ನು ಮನೆಯಲ್ಲೇ ಸೃಷ್ಟಿಸಿಕೊಳ್ಳಬಹುದು.
• ಮನೆಯಲ್ಲಿರುವ ಯಾರಿಗಾದರೂ ಕೋವಿಡ್ 19 ಸೋಂಕು ಇರುವ ಶಂಕೆ ಇದ್ದರೆ ಅಥವಾ ಸಾಬೀತಾದರೆ, ನಿಮ್ಮಿಂದ ಮತ್ತು ನಿಮ್ಮ ಕುಟುಂಬದ ಇತರ ಎಲ್ಲರಿಂದ ಅವರನ್ನು ದೂರವಿಡಿ.
ನೆನಪಿಡಿ, ಡಯಾಬಿಟೀಸ್ ಹೊಂದಿರುವವರೂ ಕೂಡ ಇತರರಷ್ಟೇ ಪ್ರಮಾಣದಲ್ಲಿ ಸೋಂಕಿಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಆದರೆ, ಸಲಹೆಯನ್ನು ಕಟ್ಟುನಿಟ್ಟಾಗಿ ಪಾಲಿಸಿ ಕೋವಿಡ್‌ನಿಂದ ಮುಕ್ತವಾಗಿರಬಹುದು.