ಹೈದರಾಬಾದ್: ಕಳೆದ ಮೂರು ತಿಂಗಳಿಂದ ಯಾವುದೇ ಸಂಬಳ ಪಡೆದುಕೊಳ್ಳದೇ ಖಿನ್ನತೆಗೊಳಗಾಗಿದ್ದ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದು, ಕೊನೆಯದಾಗಿ ಹೆಂಡತಿ ಜತೆ ಮಾತನಾಡುವ ಸಲುವಾಗಿ ವಿಡಿಯೋ ಕಾಲ್ ಮಾಡಿದ್ದಾನೆ. ಅದೇ ಆತನ ಪ್ರಾಣ ಉಳಿಸಿದೆ.
ವೈದ್ಯಕೀಯ ಪ್ರತಿನಿಧಿಯಾಗಿ ಕೆಲಸ ಮಾಡ್ತಿದ್ದ ವ್ಯಕ್ತಿಯೋರ್ವ ಲಾಕ್ಡೌನ್ನಿಂದಾಗಿ ಕಳೆದ ಮೂರು ತಿಂಗಳಿಂದ ಮನೆಯಲ್ಲಿ ಕುಳಿತಿದ್ದಾನೆ. ಸಂಬಳ ಪಡೆದುಕೊಳ್ಳದೇ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾನೆ. ಹೆಂಡತಿಗೆ ವಿಡಿಯೋ ಕಾಲ್ ಮಾಡಿರುವ ವ್ಯಕ್ತಿ ಸೂಸೈಡ್ ಮಾಡಿಕೊಳ್ಳಲು ಮುಂದಾಗಿರುವುದಾಗಿ ಹೇಳಿ, ಪೋನ್ ಕಟ್ ಮಾಡಿದ್ದಾನೆ. ಈ ವೇಳೆ ತಕ್ಷಣವೇ ಶೈಲಜಾ ಪೊಲೀಸ್ ಗಸ್ತು ವಾಹನ ನಂಬರ್ 100ಕ್ಕೆ ಕಾಲ್ ಮಾಡಿ ಮಾಹಿತಿ ನೀಡಿದ್ದಾಳೆ. ತನ್ನ ಗಂಡ ಯಾವುದೂ ರೈಲ್ವೆ ಹಳಿಯಿಂದ ಕರೆ ಮಾಡಿದ್ದು, ಅತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾನೆ ಎಂದು ತಿಳಿಸಿದ್ದಾಳೆ.
ಅಲರ್ಟ್ ಆದ ಪೊಲೀಸ್ ಸಿಬ್ಬಂದಿ, ವ್ಯಕ್ತಿಯ ಮೊಬೈಲ್ ನಂಬರ್ ಟ್ರ್ಯಾಕ್ ಮಾಡಿದ್ದಾರೆ. ಅದು ರೆಡ್ ಹಿಲ್ಸ್ ಬಳಿ ಸಿಗ್ನಲ್ ತೋರಿಸಿದೆ. ಈ ವೇಳೆ ಸೈಫಾಬಾದ್ ಪೊಲೀಸರು ನಾಂಪಲ್ಲಿ ಮತ್ತು ಲಕ್ಡಿಕಪುಲ್ ರೈಲ್ವೆ ನಿಲ್ದಾಣದಲ್ಲಿ ಪರೀಕ್ಷೆ ಮಾಡಲು ಮಾಹಿತಿ ನೀಡಿದ್ದಾರೆ. ಜತೆಗೆ ಶೈಲಜಾ ಕೂಡ ಅವರೊಂದಿಗೆ ತೆರಳಿದ್ದಾಳೆ.
ಲಕ್ಡಿಕಪುಲ್ ರೈಲ್ವೆ ಟ್ರ್ಯಾಕ್ ಮೇಲೆ ವ್ಯಕ್ತಿ ಮಲಗಿರುವುದನ್ನ ನೋಡಿರುವ ಪೊಲೀಸರು ತಕ್ಷಣವೇ ಆತನ ರಕ್ಷಣೆ ಮಾಡಿದ್ದಾರೆ. ಇದಾದ ಕೆಲವೇ ನಿಮಿಷಗಳಲ್ಲಿ ರೈಲುವೊಂದು ಇದೇ ರೈಲ್ವೆ ಟ್ರ್ಯಾಕ್ ಮೇಲೆ ಹಾಯ್ದು ಹೋಗಿದೆ. ವ್ಯಕ್ತಿಯ ಕೌನ್ಸ್ಲಿಂಗ್ ನಡೆಸಿದ ನಂತರ ಆತನನ್ನ ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ.
ಪೊಲೀಸರು ತಿಳಿಸಿರುವ ಪ್ರಕಾರ, ದೇಶದಲ್ಲಿ ಲಾಕ್ಡೌನ್ ಜಾರಿಯಾದಾಗನಿಂದಲೂ ಈತ ಮನೆಯಲ್ಲಿ ಕುಳಿತಿದ್ದು, ಸಂಬಳ ಪಡೆದುಕೊಂಡಿಲ್ಲ. ಮದ್ಯ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದನು ಎಂದಿದ್ದಾರೆ. ಜತೆಗೆ ಇವರ ಕುಟುಂಬದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದೇ ವಿಚಾರವಾಗಿ ಟ್ವೀಟರ್ನಲ್ಲಿ ಐಪಿಎಸ್ ಅಂಜನಿ ಕುಮಾರ್ ಮಾಹಿತಿ ನೀಡಿದ್ದು, ತಂತ್ರಜ್ಞಾನವೊಂದು ವ್ಯಕ್ತಿಯ ಪ್ರಾಣ ಉಳಿಸಿದೆ ಎಂದಿದ್ದಾರೆ.