ಲಖಿಂಪುರ ಖೇರಿ: ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿರುವ ದುಧ್ವಾ ಟೈಗರ್ ರಿಸರ್ವ್ ಪ್ರದೇಶದಲ್ಲಿ ಬರುವ ಗ್ರಾಮದಲ್ಲಿ ದನಗಳನ್ನು ಮೇಯಿಸುತ್ತಿದ್ದ ವ್ಯಕ್ತಿ ಮೇಲೆ ಹುಲಿ ದಾಳಿ ನಡೆಸಿ ಆತನನ್ನು ಕೊಂದು ಹಾಕಿದೆ.
ಅವಧೇಶ್ ಯಾದವ್ (32) ಮೃತ ವ್ಯಕ್ತಿ. ದುಧ್ವಾದಲ್ಲಿ ಈ ತಿಂಗಳು ಹುಲಿ ಬಾಯಿಗೆ ಸಿಲುಕಿದ ಮೂರನೇ ವ್ಯಕ್ತಿ ಇವರಾಗಿದ್ದಾರೆ. ಈ ಹಿಂದೆ, ಮಜ್ರಾ ಪುರವ್ ಗ್ರಾಮದ 60 ವರ್ಷದ ವೃದ್ಧ ಹಾಗೂ ಇನ್ನೊಬ್ಬರ ಮೇಲೆ ವ್ಯಾಘ್ರ ದಾಳಿ ನಡೆಸಿ ಕೊಂದಿತ್ತು.
ಹಸುಗಳನ್ನು ಮೇಯಿಸುತ್ತಾ ಅವಧೇಶ್ ಯಾದವ್ ಕೊಳವೊಂದರ ಬಳಿ ಕುಳಿತಿರುವಾಗ ಇದ್ದಕ್ಕಿದ್ದಂತೆ ಬಂದ ಹುಲಿ ಅವರ ಮೇಲೆ ಎಗರಿದೆ. ಯಾದವ್ ಕೂಗುತ್ತಿರುವುದನ್ನು ಕೇಳಿ ಅಲ್ಲಿ ದನಗಳನ್ನು ಮೇಯಿಸುತ್ತಿದ್ದ ಇತರರು ಹೋಗಿ ಹುಲಿ ಮೇಲೆ ಕಲ್ಲು ಎಸೆದಿದ್ದಾರೆ. ಹುಲಿ ಅಲ್ಲಿಂದ ಹೋಗುವಷ್ಟರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯಾದವ್ ಮೃತಪಟ್ಟಿದ್ದರು ಎಂದು ಅಲ್ಲಿದ್ದವರು ತಿಳಿಸಿದ್ದಾರೆ ಎಂದು ವಿಭಾಗೀಯ ಅರಣ್ಯ ಅಧಿಕಾರಿ ಅನಿಲ್ ಪಟೇಲ್ ಹೇಳಿದ್ದಾರೆ.