ನವದೆಹಲಿ: 5 ವರ್ಷದ ಒಳಗಿನ ಮಕ್ಕಳ ಸಾವಿಗೆ ಅಪೌಷ್ಠಿಕತೆಯೇ ನೇರ ಕಾರಣವಲ್ಲ ಎಂದು ಕೇಂದ್ರ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಹೇಳಿದರು.
ಈ ಬಗೆಗಿನ ಲಿಖಿತ ಪ್ರಶ್ನೆಯೊಂದಕ್ಕೆ ಲೋಕಸಭೆಯಲ್ಲಿ ಉತ್ತರ ನೀಡಿದ ಅವರು, ಅಪೌಷ್ಠಿ ಕತೆಯು ಸೋಂಕಿನ ಪ್ರತಿರೋಧ ಕಡಿಮೆ ಮಾಡುವ ಮೂಲಕ ಕಾಯಿಲೆ ಹಾಗೂ ಸಾವನ್ನು ಹೆಚ್ಚಿಸುತ್ತದೆ. ಆದರೆ, ಐದು ವರ್ಷದೊಳಗಿನ ಮಕ್ಕಳ ಸಾವಿಗೆ ಅಪೌಷ್ಠಿಕತೆ ನೇರ ಕಾರಣವಾಗಲ್ಲ. ಅಪೌಷ್ಠಿಕತೆ ನಿರ್ಮೂಲನೆಗೆ ಸರ್ಕಾರ ಸಾಕಷ್ಟು ಪ್ರಯತ್ನ ಮಾಡುತ್ತಿದೆ ಎಂದರು.
ಅಪೌಷ್ಠಿಕತೆ ಒಂದು ಸಂಕೀರ್ಣ ಹಾಗೂ ಬಹು ಆಯಾಮದ ಸಮಸ್ಯೆ. ಬಡತನ ಮತ್ತು ಅಸಮಾನ ಆಹಾರ ವಿತರಣೆ ಸೇರಿ ಹಲವಾರು ಅಂಶಗಳಿಂದ ಸೃಷ್ಟಿಯಾಗುತ್ತದೆ. 0-6 ವರ್ಷದೊಳಗಿನ ಮಕ್ಕಳು, ಹದಿಹರೆಯದ ಹುಡುಗಿಯರು, ಗರ್ಭಿಣಿಯರು ಹಾಗೂ ಹಾಲುಣಿಸುವ ತಾಯಂದಿರಿಗೆ ಸಮಯಕ್ಕೆ ಅನುಗುಣವಾಗಿ ಪೌಷ್ಠಿಕಾಂಶದ ಸ್ಥಿತಿಯಲ್ಲಿ ಸುಧಾರಣೆಯನ್ನು ಸಾಧಿಸಲು ಪ್ರಯತ್ನಿಸುವ ಪೋಶಣ್ ಅಭಿಯಾನ್ ಯೋಜನೆಯನ್ನು ಸರ್ಕಾರ ಜಾರಿಗೆ ತರುತ್ತಿದೆ ಎಂದರು.