ನವದೆಹಲಿ: ಮೆಟ್ರೋ ನಗರಗಳಲ್ಲಿ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ ವಿರುದ್ಧ ಸುಷ್ಮಿತಾ ದೇವ್ ಮತ್ತು ಅಲ್ಕಾ ಲಂಬಾ ಸೇರಿದಂತೆ ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಮುಖಂಡರು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ.
ನಿನ್ನೆಯಷ್ಟೆ ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿ ಸಬ್ಸಿಡಿ ರಹಿತ 14.2 ಕೆ.ಜಿ. ಅಡಿಗೆ ಸಿಲಿಂಡರ್ ಮೇಲೆ ಸರಾಸರಿ 144 ರೂ. ಹೆಚ್ಚಳಮಾಡಿ ಇಂದಿನಿಂದಲೆ ಪರಿಷ್ಕೃತ ದರ ಅನ್ವಯವಾಗಲಿದೆ ಎಂದು ತಿಳಿಸಲಾಗಿತ್ತು. ಬೆಲೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಡಿಸಿದ್ದ ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಇಂದು ಉತ್ತರ ಭಾರತದಾದ್ಯಂತ ಬೃಹತ್ ಪ್ರತಿಭಟನೆ ನಡೆಸುವುದಾಗಿ ಟ್ವೀಟ್ ಮಾಡಿತ್ತು.
ಇಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಚೇರಿಯ ಮುಂಭಾಗ ಜಮಾಯಿಸಿದ್ದ ಕಾಂಗ್ರೆಸ್ ಮಹಿಳಾ ಘಟಕದ ನಾಯಕಿಯರು ಕೇಂದ್ರ ಸರ್ಕಾದ ವಿರುದ್ಧ ಘೋಷಣೆ ಕೂಗಿದ್ರು. ಕೂಡಲೆ ಬೆಲೆ ಏರಿಕೆ ಆದೇಶವನ್ನ ಹಿಂಪಡೆಯುವಂತೆ ಆಗ್ರಹಿಸಿದ್ರು.
ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕಿ ಸುಶ್ಮಿತಾ ದೇವ್, ಈ ಬೆಲೆ ಏರಿಕೆ ಸಾಮಾನ್ಯ ಜನರಿಗೆ ಬಿಗ್ ಶಾಕ್ ನೀಡಿದ್ದು, ಸಾರ್ವಜನಿಕರಿಗೆ ಬಾರೀ ಹೊರೆ ಬೀಳಲಿದೆ. ನಿಜಕ್ಕೂ ಈ ಸರ್ಕಾರ ಪ್ರಜ್ಞಾಹೀನ ಸರ್ಕಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.