ಹಿಂದೂ ಚಾತುರ್ವರ್ಣ ವ್ಯವಸ್ಥೆಯಲ್ಲಿನ ಜಾತಿ ಪದ್ಧತಿಯಿಂದ ದಲಿತರು ಅನ್ಯಾಯ, ದಬ್ಬಾಳಿಕೆ ಮತ್ತು ಶೋಷಣೆಗೆ ಒಳಗಾಗಿ ತಮ್ಮ ಜೀವನ ಸವೆಸುತ್ತಿದ್ದರು. ಇದರಿಂದ ತೀವ್ರ ಬೇಸತ್ತಿದ್ದ ಮಹಾತ್ಮ ಗಾಂಧೀಜಿಯವರು ತಮ್ಮ ಮುಂದಿನ ಜನ್ಮದಲ್ಲಿ ಹರಿಜನರ ಪೋಷಕರಾಗೆ ಜನಿಸುವ ಬಯಕೆ ಹೊಂದಿದ್ದರು. ಆದರೆ, ಗಾಂಧಿ ಅವರ ತವರು ರಾಜ್ಯ ಗುಜರಾತ್ನಲ್ಲಿ ದಲಿತರು ಕಳೆದ ಶತಮಾನಕ್ಕಿಂತಲೂ ಇಂದು ಹೆಚ್ಚು ದಬ್ಬಾಳಿಕೆಗೆ ಒಳಗಾಗುತ್ತಿದ್ದಾರೆ.
ಕಳೆದ 23 ವರ್ಷಗಳಲ್ಲಿ ಗಾಂಧಿ ತವರು ರಾಜ್ಯದಲ್ಲಿನ ಮೇಲ್ಜಾತಿಯ ಹಿಂದೂಗಳು ದಲಿತ ಸಮುದಾಯಕ್ಕೆ ಸೇರಿದ 524 ಜನರನ್ನು ಹತ್ಯೆ ಮಾಡಿದ್ದಾರೆ. ಇದೇ ಅವಧಿಯಲ್ಲಿ 1,133 ದಲಿತ ಮಹಿಳೆಯರ ಮೇಲೆ ಅತ್ಯಾಚಾರ ನಡೆದಿದ್ದು, ಸಮುದಾಯದ 2,100ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ವೇಳೆಯಲ್ಲಿ 38,600ಕ್ಕೂ ಹೆಚ್ಚು ದಲಿತರ ವಿರುದ್ಧ ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿವೆ. ಗಾಂಧೀಜಿಯವರು ಹರಿಜನಕ್ಕೆ ಸೇರಿದ್ದ ಯಾವುದಾರೂ ಒಂದು ಬಡ ಕುಟುಂಬದಲ್ಲಿ ಹೆಣ್ಣಾಗಿ ಜನಿಸಬೇಕೆಂಬ ಹಂಬಲ ಹೊಂದಿದ್ದರು. ತಮ್ಮ ಬಾಲ್ಯದಿಂದ ಆರಂಭಿಸಿ ಜೀವನದುದ್ದಕ್ಕೂ ಹಿಂದೂ ಸಮಾಜವನ್ನು ಕಾಡುತ್ತಿರುವ ಅಸ್ಪೃಷ್ಯತೆಯ ಉಪದ್ರವವನ್ನು ವಿರೋಧಿಸಿದ್ದರು. ಮನೆಯ ಶೌಚಾಲಯವನ್ನು ಸ್ವಚ್ಛಗೊಳಿಸಿದ್ದ ವ್ಯಕ್ತಿಯನ್ನು ಸ್ಪರ್ಶಿಸಬಾರದು ಎಂಬ ತಮ್ಮ ತಾಯಿಯ ಕಠಿಣ ಎಚ್ಚರಿಕೆಯನ್ನು ಗಾಂಧಿ ನಿರಾಕರಿಸಿದ್ದರು.
'ಅಸ್ಪೃಷ್ಯತೆ' ಹಿಂದೂ ಧರ್ಮದ ದೊಡ್ಡ ಕಳಂಕವೆಂದು ಗಾಂಧೀಜಿಯವರು ಮನಗಂಡಿದ್ದರು. ವೇದ ಮತ್ತು ಪುರಾಣಗಳಲ್ಲಿ ಯಾರಾದರೂ ಅಸ್ಪೃಷ್ಯತೆಯನ್ನು ಪ್ರತಿಪಾದಿಸಿದ್ದರೆ. ಅದನ್ನು ತೋರಿಸಬೇಕೆಂದು ಸಂಸ್ಕೃತ ಗ್ರಂಥಗಳು ಓದುತ್ತಿದ್ದ ಅಂದಿನ ವಿದ್ವಾಂಸರಿಗೆ ಸವಾಲು ಹಾಕಿದ್ದರು. "ಈ ವೇದ ಮತ್ತು ಪುರಾಣಗಳಲ್ಲಿ ಯಾರಾದರೂ ಅಸ್ಪೃಷ್ಯತೆಯನ್ನು ಬೆಂಬಲಿಸಿದರೆ ನಾನು ತಿರಸ್ಕರಿಸುತ್ತೇನೆ" ಎಂದು ಕಡ್ಡಿ ಮುರಿದಂತೆ ಹೇಳಿದ್ದರು.
ಅಸ್ಪೃಷ್ಯತೆಯನ್ನು ತೆಗೆದುಹಾಕಲು ಗಾಂಧೀಜಿಯವರು ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ ನೀಡಿದ್ದರು. ವರ ಅಥವಾ ವಧು ಹರಿಜನರಾಗಿದ್ದು, ಆ ಸಂಗಾತಿ ಮೇಲ್ಜಾತಿಯವರಾಗಗಿದ್ದ ಮದುವೆಗಳಿಗೆ ಮಾತ್ರ ಹಾಜರಾಗುವುದಾಗಿ ಘೋಷಿಸಿದ್ದರು. ತಮ್ಮ ಪತ್ರಿಕೆಗಳಿಗೆ ಹರಿಜನ್ (ಇಂಗ್ಲಿಷ್), ಹರಿಜನ್ ಬಂಧು (ಹಿಂದಿ) ಮತ್ತು ಹರಿಜನ್ ಸೇವಕ್ (ಗುಜರಾತಿ) ಎಂದು ಹೆಸರಿಸಿದ್ದರು.
1933-34 ನಡುವೆ ಜೈಲಿನಿಂದ ಬಿಡುಗಡೆಯಾದ ನಂತರ ಗಾಂಧೀಜಿಯವರು ದೇಶಾದ್ಯಂತ ಒಂದು ವರ್ಷ ‘ಹರಿಜನ ಯಾತ್ರೆ’ ನಡೆಸಿದ್ದರು. ಹರಿಜನರನ್ನು ಹಿಂದೂ ದೇವಾಲಯಗಳಿಗೆ ಮುಕ್ತವಾಗಿ ಪ್ರವೇಶ ನೀಡಬೇಕು ಎಂದು ಪ್ರಚಾರ ಮಾಡಿದ್ದರು. ಇವರ ಕರೆಗೆ ಒಪ್ಪಿದ ಕೈಗಾರಿಕೋದ್ಯಮಿ ಭಕ್ತ ಜಮ್ನಾಲಾಲ್ ಬಜಾಜ್ ಅವರು, ಹರಿಜನರಿಗೆ ವಾರ್ಧದಲ್ಲಿ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಿದ್ದರು. ಜಾತಿ ವ್ಯವಸ್ಥೆ ಆಳವಾಗಿ ಬೇರು ಬಿಟ್ಟಿದ್ದ ಕೇರಳದಲ್ಲೂ ತಮ್ಮ ಹರಿಜನ ಯಾತ್ರೆ ಕೊಂಡೊಯ್ದರು. ತಿರುವಾಂಕೂರು ರಾಜ್ಯದ ಮಹಾರಾಜರು ದೇವಾಲಯಗಳಿಗೆ ದಲಿತರ ಮುಕ್ತ ಪ್ರವೇಶಕ್ಕೆ ಅನುಮತಿ ನೀಡಿದ್ದರು. ಈ ಹಿಂದೆ ದೇವಾಲಯಗಳಿಗೆ ಹೋಗುವ ಸಾರ್ವಜನಿಕ ರಸ್ತೆಗಳಲ್ಲಿ ದಲಿತರ ಸಂಚಾರಕ್ಕೆ ವಿಧಿಸಿದ್ದ ನಿರ್ಬಂಧಗಳ ವಿರುದ್ಧ ಗಾಂಧೀಜಿಯವರು ಕೇರಳದ ವೈಕೋಮ್ನಲ್ಲಿ ಸತ್ಯಾಗ್ರಹ ಚಳವಳಿಗೂ ರಾಜರು ಸಂಪೂರ್ಣ ಬೆಂಬಲ ನೀಡಿದ್ದರು.
ಹಲವಾರು ವಿಷಯಗಳ ಬಗ್ಗೆ ಗಾಂಧೀಜಿ ಮತ್ತು ಡಾ. ಬಿ ಆರ್ ಅಂಬೇಡ್ಕರ್ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳು ಇದ್ದರೂ, ಅಂಬೇಡ್ಕರ್ ಅವರನ್ನು ಸಂಪುಟದಲ್ಲಿ ಸೇರಿಸಿಕೊಳ್ಳಬೇಕೆಂದು ಗಾಂಧೀಜಿಯವರು ಪಂಡಿತ್ ಜವಾಹರಲಾಲ್ ನೆಹರೂ ಅವರಿಗೆ ಒತ್ತಾಯಿಸಿದ್ದರು. ಡಾ.ಅಂಬೇಡ್ಕರ್ ಅವರು ಯಾವಾಗಲೂ ಕಾಂಗ್ರೆಸ್‌ನ ವಿರೋಧಿಸುತ್ತಿದ್ದಾರೆ. ನಾನು ಅವರನ್ನು ಮಂತ್ರಿಯನ್ನಾಗಿ ಮಾಡುವುದು ಹೇಗೆ? ಎಂದು ಪಂಡಿತ್ ನೆಹರೂ ಪ್ರಶ್ನಿಸಿದ್ದರು. ಅದಕ್ಕೆ ತೀಕ್ಷ್ಣವಾಗಿ "ನೀವು ಕಾಂಗ್ರೆಸ್ ಅಥವಾ ರಾಷ್ಟ್ರದ ಕ್ಯಾಬಿನೆಟ್ ರಚಿಸಲು ಬಯಸುವಿರಾ?" ಎಂದು ಗಾಂಧೀಜಿ ಪ್ರಶ್ನಿಸಿದರು. ಕೊನೆಗೂ ಡಾ.ಅಂಬೇಡ್ಕರ್ ಅವರನ್ನು ನೆಹರೂ ಅವರು ತಮ್ಮ ಮೊದಲ ಸಂಪುಟದಲ್ಲಿ ಕೇಂದ್ರ ಕಾನೂನು ಸಚಿವರಾಗಿ ನೇಮಕ ಮಾಡಿಕೊಂಡರು.