ಮಹಾರಾಷ್ಟ್ರ: ಗುರುವಾರ ಅಧಿಕೃತವಾಗಿ ಸರ್ಕಾರ ರಚನೆ ಮಾಡಿರುವ ಶಿವಸೇನೆ- ಕಾಂಗ್ರೆಸ್ ಎನ್ಸಿಪಿ ಮೈತ್ರಿಕೂಟದ ಸರ್ಕಾರ ಇಂದು ವಿಶ್ವಾಸಮತ ಸಾಬೀತು ಮಾಡಿದೆ. ಸದನದಲ್ಲಿ ಶಿವಸೇನೆ, ಎನ್ಸಿಪಿ ಹಾಗೂ ಕಾಂಗ್ರೆಸ್ ವಿಶ್ವಾಸಮತ ಸಾಬೀತು ಮಾಡುವಲ್ಲಿ ಯಶಸ್ವಿಯಾಗಿವೆ.
ಸರ್ಕಾರದ ಪರ 169 ಶಾಸಕರು ಮತದಾನ ಮಾಡಿದರು. ಈ ಮೂಲಕ 288 ಸದಸ್ಯ ಬಲದ ವಿಧಾನಸಭೆಯಲ್ಲಿ ಶಿವಸೇನಾ ಮೈತ್ರಿಕೂಟ ಸ್ಪಷ್ಟ ಬಹುಮತದಿಂದ ಅಧಿಕಾರ ಹಿಡಿದಿದೆ. ಸರಳ ಬಹುಮತಕ್ಕೆ 145 ಮತಗಳಷ್ಟೇ ಬೇಕಿತ್ತು. ಆದರೆ ಸರ್ಕಾರ 169 ಸದಸ್ಯರ ಬೆಂಬಲದಿಂದ ವಿಶ್ವಾಸಮತ ಸಾಬೀತು ಪಡಿಸಿದೆ.
ಕಲಾಪ ಆರಂಭವಾಗುತ್ತಿದ್ದಂತೆ ಉದ್ದವ್ ಠಾಕ್ರೆ ವಿಶ್ವಾಸ ಮತಯಾಚನೆ ಮಾಡಿದರು. ಈ ನಡುವೆ, ಬಿಜೆಪಿ ವಿಧಾನಸಭೆ ಅಧಿವೇಶನ ಕರೆದಿರುವ ಸರ್ಕಾರ ಕ್ರಮ ಸರಿಯಾಗಿಲ್ಲ. ಇದ್ದಕ್ಕಿದ್ದಂತೆ ಹಂಗಾಮಿ ಸ್ಪೀಕರ್ ಅವರನ್ನ ಬದಲಿಸಲಾಗಿದೆ ಎಂದು ಆರೋಪಿಸಿತು. ಬಿಜೆಪಿ ನಾಯಕ ದೇವೇಂದ್ರ ಪಡ್ನವಿಸ್ ಸರ್ಕಾರದ ನಡಾವಳಿಯನ್ನ ಖಂಡಿಸಿದರು.
ಇದರಿಂದಾಗಿ ಕಲಾಪದಲ್ಲಿ ತೀವ್ರ ಗದ್ದಲ ಉಂಟಾಗಿದ್ದು, ಹೊಸ ಅಧಿವೇಶನ ನಡೆಸುವುದಕ್ಕೂ ಮೊದಲು ರಾಜ್ಯಪಾಲರನ್ನು ಕರೆಸಬೇಕು. ಆದರೆ ಇದಾವ ನಿಯಮಗಳನ್ನು ಪಾಲನೆ ಮಾಡದೇ ನಿಯಮ ಉಲ್ಲಂಘಿಸುತ್ತಿದ್ದಾರೆ ಎಂದು ಬಿಜೆಪಿಯ ದೇವೇಂದ್ರ ಫಡ್ನವೀಸ್ ಅರೋಪಿಸಿದರು.
ಇದೇ ವೇಳೆ, ಬಿಜೆಪಿ ವಿಶ್ವಾಸಮತ ಯಾಚನೆ ವಿರೋಧಿಸಿ ಬಿಜೆಪಿ ಸಭಾತ್ಯಾಗ ಮಾಡಿತು. ಸಭಾತ್ಯಾಗ ಮಾಡಿ ಮಾತನಾಡಿದ ಮಾಜಿ ಸಿಎಂ ದೇವೇಂದ್ರ ಪಡ್ನವಿಸ್ ಸರ್ಕಾರ ವಿಧಾನಸಭೆ ಕಲಾಪದ ನಿಯಮಗಳನ್ನ ಗಾಳಿಗೆ ತೂರಿದೆ. ಹೀಗೆ ನಿಯಮಬಾಹಿರವಾಗಿ ಅಧಿವೇಶನ ನಡೆಸುತ್ತಿರುವುದು ದೇಶದಲ್ಲೇ ಮೊದಲ ಬಾರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ನಡುವೆ ಇದ್ದಕ್ಕಿದ್ದಂತೆ ಹಂಗಾಮಿ ಸ್ಪೀಕರ್ ಬದಲಿಸಿರುವುದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ಈ ಸಂಬಂಧ ರಾಜ್ಯಪಾಲರಿಗೆ ದೂರು ನೀಡಲು ನಿರ್ಧರಿಸಿದೆ.