ಮುಂಬೈ: ಬರೋಬ್ಬರಿ 70 ಸಾವಿರ ಕೋಟಿ ನೀರಾವರಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ವಿರುದ್ಧ ದಾಖಲಾಗಿದ್ದ 20 ಕೇಸ್ಗಳ ಪೈಕಿ ಇದೀಗ 9ರಲ್ಲಿ ಕ್ಲೀನ್ ಚಿಟ್ ನೀಡಲಾಗಿದೆ.
ಈ ಹಿಂದೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್+ಎನ್ಸಿಪಿ ಮೈತ್ರಿ ಸರ್ಕಾರ ಆಡಳಿತ ನಡೆಸುತ್ತಿದ್ದ ವೇಳೆ ನೀರಾವರಿಯ ವಿವಿಧ ಯೋಜನೆಗಳಿಗೆ ಅನುಮೋದನೆ ನೀಡುವಾಗ ಸುಮಾರು 70 ಸಾವಿರ ಕೋಟಿ ರೂಪಾಯಿ ಭ್ರಷ್ಟಾಚಾರ ಹಾಗೂ ಅಕ್ರಮ ನಡೆದಿದೆ ಎಂಬ ಆರೋಪದ ಮೇಲೆ ಇವರ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಮಹಾರಾಷ್ಟ್ರ ಭ್ರಷ್ಟಾಚಾರ ನಿಗ್ರಹ ದಳ, ಕೆಲವೊಂದು ಷರತ್ತುಗಳ ಮೇಲೆ ಈ ಪ್ರಕರಣಗಳನ್ನ ಇದೀಗ ಮುಚ್ಚಲಾಗಿದ್ದು, ಅಗತ್ಯಬಿದ್ದರೆ ವಿಚಾರಣೆ ನಡೆಸುವುದಾಗಿ ತಿಳಿಸಿದೆ.
ಅಜಿತ್ ಪವಾರ್ ಅವಧಿಯಲ್ಲಿ ಕೆಲವೊಂದು ನಿರಾವರಿ ಯೋಜನೆಗಳು ಜಾರಿಗೊಳ್ಳುವಲ್ಲಿ ವಿಳಂಬವಾಗಿದ್ದವು. ಜತೆಗೆ ಅವುಗಳ ವೆಚ್ಚದಲ್ಲಿ ಭಾರಿ ಏರಿಕೆ ಕಂಡು ಬಂದಿತ್ತು. ಇದಕ್ಕೆ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾಗಿದ್ದವು. 1999 ಹಾಗೂ 2014ರಲ್ಲಿ ಕಾಂಗ್ರೆಸ್ ಹಾಗೂ ಎನ್ಸಿಪಿ ಮೈತ್ರಿ ಸರ್ಕಾರ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ವೇಳೆ ನೀರಾವರಿ ಇಲಾಖೆ ಉಸ್ತುವಾರಿಯನ್ನ ಅಜಿತ್ ಪವಾರ್ ಹೊತ್ತುಕೊಂಡಿದ್ದರು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಶಿವಸೇನೆ, ತಾತ್ಕಾಲಿಕ ಮುಖ್ಯಮಂತ್ರಿ ಇದೀಗ ತಾತ್ಕಾಲಿಕ ಡಿಸಿಎಂಗೆ ಪ್ರಕರಣಗಳಲ್ಲಿ ಕ್ಲೀನ್ ಚಿಟ್ ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದೆ.