ನವದೆಹಲಿ: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಚೀನಾವನ್ನೇ ಮಹಾರಾಷ್ಟ್ರ ಮೀರಿಸಿದ್ದು, ಈಗಾಗಲೇ 85 ಸಾವಿರಕ್ಕೂ ಅಧಿಕ ಪ್ರಕರಣಗಳು ಈ ಒಂದೇ ರಾಜ್ಯದಲ್ಲಿ ಪತ್ತೆಯಾಗಿವೆ. ಪ್ರತಿದಿನ ಸಾವಿರಾರು ಹೊಸ ಕೇಸ್ ಕಂಡು ಬರುತ್ತಿದ್ದು, ನೂರಾರು ಜನರು ಸಾವನ್ನಪ್ಪುತ್ತಿದ್ದಾರೆ. ಇಲ್ಲಿನ ಸರ್ಕಾರ ಸೋಂಕು ನಿಯಂತ್ರಣ ಮಾಡುವಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.
ಮಹಾರಾಷ್ಟ್ರ ಜನ್ ಸಂವಾದ್ ರ‍್ಯಾಲಿಯಲ್ಲಿ ಭಾಗಿಯಾಗಿ ಮಾತನಾಡಿದ ರಾಜನಾಥ್ ಸಿಂಗ್, ಮಹಾರಾಷ್ಟ್ರ ಕೊರೊನಾ ನಿಯಂತ್ರಣ ಮಾಡುವುದು ಹೇಗೆ ಎಂಬುದನ್ನ ಕರ್ನಾಟಕ ಹಾಗೂ ಉತ್ತರ ಪ್ರದೇಶ ರಾಜ್ಯಗಳನ್ನು ನೋಡಿ ಕಲಿತುಕೊಳ್ಳಬೇಕು. ಜನಸಾಮಾನ್ಯರು ಪ್ರತಿದಿನ ತೊಂದರೆಯಿಂದ ಬಳಲುತ್ತಿದ್ದು, ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲಗೊಂಡಿದೆ. ಅಲ್ಲಿನ ವಲಸೆ ಕಾರ್ಮಿಕರಿಗೆ ನಟ ಸೋನು ಸೂದ್ ಸಹಾಯ ಮಾಡ್ತಿದ್ದರೆ, ಸಚಿವರೊಬ್ಬರು ಅದನ್ನ ಟೀಕೆ ಮಾಡ್ತಿದ್ದಾರೆ ಎಂದಿದ್ದಾರೆ.
ಮುಂಬೈನ ಅನೇಕ ಆಸ್ಪತ್ರೆಗಳಲ್ಲಿ ಕೊರೊನಾದಿಂದ ಸಾವನ್ನಪ್ಪಿ ಮೃತದೇಹಗಳು ಅಲ್ಲಿಯೇ ಉಳಿದುಕೊಂಡಿರುವ ದೃಶ್ಯ ನಾನು ಟಿವಿಯಲ್ಲಿ ನೋಡಿದ್ದೇನೆ. ಸರ್ಕಾರ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿರುವುದು ಏಕೆ ಎಂದು ಪ್ರಶ್ನೆ ಮಾಡಿದ್ದಾರೆ. ಮಹಾರಾಷ್ಟ್ರಕ್ಕೆ ಎಲ್ಲಾ ರೀತಿಯ ಸೌಲಭ್ಯ ಒದಗಿಸಲು ನಾವು ಸಿದ್ಧರಿದ್ದೇವೆ ಎಂದು ಅವರು ಇದೇ ವೇಳೆ ಹೇಳಿದ್ದಾರೆ.