ಡೆಹ್ರಾಡೂನ್: ದೇಶದ ರಾಜಕೀಯದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿ, ಅಂತಿಮವಾಗಿ ಬಿಜೆಪಿಯು ಮಹಾರಾಷ್ಟ್ರದಲ್ಲಿ ಸರ್ಕಾರವನ್ನು ರಚಿಸಿತು. ಒಂದು ರಾತ್ರಿ ಕಳೆದು ಬೆಳಗಾಗುತ್ತಿದ್ದಂತೆಯೇ ಪಕ್ಷದ ಮುಖಂಡ ದೇವೇಂದ್ರ ಫಡ್ನವೀಸ್ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅದೇ ಸಮಯದಲ್ಲಿ ಎನ್‌ಸಿಪಿ ಮುಖಂಡ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಮಹಾರಾಷ್ಟ್ರದ ಬಿಜೆಪಿ ನಾಯಕರು ಈ ಇಡೀ ಪ್ರಸಂಗವನ್ನು ಕೇದಾರನಾಥನ ಆಶೀರ್ವಾದವಾಗಿ ನೋಡುತ್ತಿದ್ದಾರೆ. ಏಕೆಂದರೆ ಮಹಾರಾಷ್ಟ್ರ ಚುನಾವಣೆಯ ನಂತರ ಮತ್ತು ಫಲಿತಾಂಶದ ಮೊದಲು, ದೇವೇಂದ್ರ ಫಡ್ನವೀಸ್ ತಮ್ಮ ಗೆಲುವಿಗಾಗಿ ಉತ್ತರಾಖಂಡ್ನ ಕೇದಾರನಾಥನ ಮೊರೆ ಹೋಗಿದ್ದರು.
ಹೀಗೆ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕೆಂದು ಕೇದಾರನಾಥನ ಬಳಿ ಹೋದವರು ಫಡ್ನವೀಸ್ ಮಾತ್ರವಲ್ಲ. ಇದಕ್ಕೂ ಮುಂಚೆಯೇ, ಅನೇಕ ದೊಡ್ಡ ನಾಯಕರು ಇಲ್ಲಿಗೆ ಬಂದಿದ್ದಾರೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಹೌದು. 2019 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನರೇಂದ್ರ ಮೋದಿ ಕೇದಾರನಾಥನ ದರ್ಶನ ಪಡೆದಿದ್ದರು. ಕೇದಾರನಾಥದಲ್ಲಿರುವ ಧ್ಯಾನ ಗುಹೆಯಲ್ಲಿ ಧ್ಯಾನವನ್ನೂ ಮಾಡಿದ್ದರು.
ಮೋದಿ ಮಾರ್ಗವನ್ನು ಅನುಸರಿಸಿದ್ದ ಫಡ್ನವೀಸ್, ಈಗ ಎರಡನೇ ಬಾರಿ ಮಹಾರಾಷ್ಟ್ರದ ಸಿಎಂ ಆಗಿದ್ದಾರೆ. ಹೀಗಾಗಿ ಮಹಾರಾಷ್ಟ್ರದಲ್ಲಾದ ಈ ರಾಜಕೀಯ ಬೆಳವಣಿಗೆ ಹಿಂದೆ ಕೇದಾರನಾಥನ ಆಶೀರ್ವಾದ ಇದೆ ಎನ್ನುವ ರೀತಿಯಲ್ಲಿ ಬಿಜೆಪಿ ನಾಯಕರು ಮಾತನಾಡಿಕೊಳ್ಳುತ್ತಿದ್ದಾರೆ.