ಮುಂಬೈ: ಮಹಾರಾಷ್ಟ್ರದ ರಾಯಗಢದಲ್ಲಿ ಸಂಭವಿಸಿದ ಕಟ್ಟಡ ಕುಸಿತದಲ್ಲಿ ನಾಪತ್ತೆಯಾಗಿರುವ ತನ್ನ ಮಗಳು ಹಾಗೂ ಮೊಮ್ಮಕ್ಕಳಿಗಾಗಿ 64 ವರ್ಷದ ವೃದ್ಧನೋರ್ವ ಹುಡುಕಾಟ ನಡೆಸಿದ್ದಾರೆ.
ಮಂದಗಡ್ನಲ್ಲಿ ವಾಸವಾಗಿರುವ ಮೊಹಮ್ಮದ್ ಅಲಿಗೆ ಅವರ ಪುತ್ರ ನಿನ್ನೆ ರಾತ್ರಿ ಕಟ್ಟಡ ಕುಸಿತದ ಮಾಹಿತಿ ತಿಳಿಸಿದ್ದಾರೆ. ತಕ್ಷಣವೇ ಮೊಹಮ್ಮದ್ ಅಲಿ ಮಂದಗಡ್ನಿಂದ 40 ಕಿ.ಮೀ. ದೂರದಲ್ಲಿರುವ ಘಟನೆ ನಡೆದ ಮಹಾದ್ ಪ್ರದೇಶಕ್ಕೆ ಬಂದಿದ್ದಾರೆ. ಆದರೆ ಮಗಳು-ಮೊಮ್ಮಕ್ಕಳ ಬಗ್ಗೆ ಯಾವ ಸುಳಿವೂ ಸಿಕ್ಕಿಲ್ಲ.
"ನನ್ನ ಮಗಳು, ಐದು ಮತ್ತು ಎರಡು ವರ್ಷ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳು ಹಾಗೂ ಮೂರು ವರ್ಷದ ಮಗನೊಂದಿಗೆ ಈ ಕಟ್ಟಡದಲ್ಲಿ ವಾಸವಿದ್ದಳು. ಅವರಿಗೆ ಏನಾಗಿದೆಯೋ ನನಗೆ ತಿಳಿಯುತ್ತಿಲ್ಲ. ಅವಶೇಷಗಳಡಿಯಲ್ಲಿ ಹುಡುಕಲು ಅಧಿಕಾರಿಗಳು ನನಗೆ ಅವಕಾಶ ನೀಡುತ್ತಿಲ್ಲ. ನಾಲ್ವರೂ ಸುರಕ್ಷಿತವಾಗಿ ಸಿಕ್ಕರೆ ಸಾಕೆಂದು ನಾನು ಬೇಡಿಕೊಳ್ಳುತ್ತೇನೆ" ಎಂದು ಮೊಹಮ್ಮದ್ ಅಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ನಿನ್ನೆ ಸಂಜೆ ರಾಯಗಢ ಜಿಲ್ಲೆಯ ಮಹಾದ್ ಪ್ರದೇಶದಲ್ಲಿರುವ ಐದು ಅಂತಸ್ತಿನ ಅತಿ ಹಳೆಯ ಕಟ್ಟಡವೊಂದು ಕುಸಿದು ಬಿದ್ದಿತ್ತು. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಈವರೆಗೆ 60ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಇನ್ನೂ 18 ಮಂದಿ ಕಟ್ಟಡದ ಅವಶೇಷಗಳಡಿ ಸಿಲುಕಿದ್ದಾರೆ. ಮೂರು ಎನ್‌ಡಿಆರ್‌ಎಫ್ ತಂಡಗಳು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದ್ದಾರೆ.