ಮುಂಬೈ: ಲಾಕ್ಡೌನ್ ಅವಧಿಯಲ್ಲಿ ಕರ್ತವ್ಯದಲ್ಲಿದ್ದ 15 ಅಧಿಕಾರಿಗಳು ಸೇರಿ ಮಹಾರಾಷ್ಟ್ರದಲ್ಲಿ ಈವರೆಗೆ 96 ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಸೋಂಕಿತ ಪೊಲೀಸರ ಪೈಕಿ ಮೂವರು ಅಧಿಕಾರಿಗಳು ಹಾಗೂ ನಾಲ್ವರು ಸಿಬ್ಬಂದಿ ಸೇರಿ ಒಟ್ಟು ಏಳು ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಇಂದು ಮುಂಬೈನ ಆಸ್ಪತ್ರೆಯೊಂದರಲ್ಲಿ ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದ 57 ವರ್ಷದ ಹೆಡ್ ಕಾನ್ಸ್ಟೇಬಲ್ ಮೃತಪಟ್ಟಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಲಾಕ್ಡೌನ್ ನಿಯಮ ಉಲ್ಲಂಘನೆ ಸಂಬಂಧ ಮಾರ್ಚ್ 22 ರಿಂದ ಈವರೆಗೆ ಒಟ್ಟು 69,374 ಕೇಸ್ಗಳನ್ನು ದಾಖಲಿಸಿರುವ ಪೊಲೀಸರು, 4,955 ಜನರ ಬಂಧಿಸಿದ್ದು, 47,168 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ನಿಯಮ ಉಲ್ಲಂಘಿಸಿದ್ದನ್ನು ಪ್ರಶ್ನಿಸಿದಕ್ಕೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಸಂಬಂಧ 147 ಪ್ರಕರಣಗಳು ದಾಖಲಾಗಿದ್ದು, 477 ಮಂದಿಯನ್ನು ಬಂಧಿಸಲಾಗಿದೆ.
ಇನ್ನು, ಕ್ವಾರಂಟೈನ್ ನಿಯಮ ಉಲ್ಲಂಘಿಸಿದ 602 ಮಂದಿಯನ್ನು ಪತ್ತೆ ಮಾಡಿ ಮತ್ತೆ ಅವರನ್ನು ಐಸೋಲೇಷನ್ನಲ್ಲಿರಿಸಲಾಗಿದೆ. ಅಕ್ರಮ ಸಾಗಾಟ ಸಂಬಂಧ 1,084 ಕೇಸ್ಗಳು ಹಾಗೂ 47,168 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಆದರೆ ಇವರೆಲ್ಲರಿಂದ ಈಗ ಜನರಿಗೆ ರಕ್ಷಣೆ ನೀಡುವ ಆರಕ್ಷಕರಿಗೇ ಮಹಾಮಾರಿ ಅಂಟಿದಂತಾಗಿದೆ.