ಕೋಲ್ಕತ್ತಾ: ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಸರ್ಕಾರ ಕೊರೊನಾ ವೈರಸ್ ಪ್ರಸರಣ ತಡೆಗೆ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ರಾಜ್ಯದಲ್ಲಿ ವಾರದಲ್ಲಿ ಎರಡು ದಿನ ಸಂಪೂರ್ಣ ಲಾಕ್ಡೌನ್ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಈದ್ ಕಾರಣ ಆಗಸ್ಟ್ 1ರಂದು ರಾಜ್ಯದಲ್ಲಿ ಲಾಕ್ಡೌನ್ ಇರುವುದಿಲ್ಲ. ಜುಲೈ 29, ಆಗಸ್ಟ್ 2, 5, 8, 9, 16, 17, 23, 24 ಹಾಗೂ 31ರಂದು ಕರ್ಫ್ಯೂ ಜಾರಿಗೊಳಿಸುವುದಾಗಿ ಮಮತಾ ಬ್ಯಾನರ್ಜಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇದರ ಜೊತೆಗೆ ಕಂಟೈನ್ಮೆಂಟ್ ಝೋನ್ಗಳಲ್ಲಿ ಆಗಸ್ಟ್ 31ರವರೆಗೆ ಲಾಕ್ಡೌನ್ ಮುಂದುವರಿಯಲಿದೆ ಎಂದು ಅವರು ಹೇಳಿದ್ದಾರೆ.
ದೀದಿ ನಾಡಲ್ಲಿ ಹೇಗಿದೆ ಕೊರೊನಾ ಅಬ್ಬರ?:
ರಾಜ್ಯದಲ್ಲಿ ಈಗಾಗಲೇ 60,830 ಕೋವಿಡ್ ಪ್ರಕರಣಗಳಿದ್ದು, 1,411 ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ 19,502 ಸಕ್ರಿಯ ಪ್ರಕರಣಗಳಿದ್ದು, 39,917 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.