ಹೈದರಾಬಾದ್: ಮಹಾಮಾರಿ ಕೊರೊನಾ ಪ್ರಕರಣ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಈಗಾಗಲೇ ಘೋಷಣೆ ಮಾಡಿರುವ ಲಾಕ್ಡೌನ್ ಆದೇಶ ಮತ್ತಷ್ಟು ಕಾಲಾವಧಿಗೆ ಮುಂದುವರಿಸುವ ಬಗ್ಗೆ ಸರ್ಕಾರ ಚಿಂತಿಸುತ್ತಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.
ದೇಶದಲ್ಲಿ ಕೋವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ ಈಗಾಗಲೇ ಎರಡು ಸಾವಿರದ ಗಡಿ ದಾಟಿದೆ. ಹೀಗಾಗಿ ಲಾಕ್ಡೌನ್ ಅವಧಿಯನ್ನು ಮತ್ತಷ್ಟು ಮುಂದುವರಿಸಿ, ಕೊರೊನಾ ವಿರುದ್ಧದ ಹೋರಾಟವನ್ನು ಮತ್ತಷ್ಟು ಕಠಿಣಗೊಳಿಸುವ ಸಾಧ್ಯತೆ ದಟ್ಟವಾಗಿದೆ. ಡೆಡ್ಲಿ ವೈರಸ್ ವಿರುದ್ಧ ಈಗಾಗಲೇ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿರುವ ಕೇಂದ್ರ ಹಾಗು ರಾಜ್ಯ ಸರ್ಕಾರಗಳು 21 ದಿನಗಳ ಕಾಲಾವಧಿಯ ಲಾಕ್ಡೌನ್ ಅನ್ನು ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೆ ತರುತ್ತಿವೆ. ಹೀಗಿದ್ದರೂ ದೇಶದ ನಾನಾ ಕಡೆಗಳಲ್ಲಿ ಜನರು ರಸ್ತೆಗಳಿದು ಬೇಕಾಬಿಟ್ಟು ಸುತ್ತುವುದು ಕಡಿಮೆಯಾದಂತೆ ಕಾಣುತ್ತಿಲ್ಲ.
ಇದೇ ವಿಷಯವಾಗಿ ಮಾತನಾಡಿರುವ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟಾಪೆ, ಮುಂಬೈ ಹಾಗೂ ಕೆಲವು ಪ್ರದೇಶಗಳಲ್ಲಿ ಎರಡು ವಾರ ಹೆಚ್ಚುವರಿಯಾಗಿ ಲಾಕ್ಡೌನ್ ಮುಂದುವರೆಯಬಹುದು ಎಂದು ಎಚ್ಚರಿಸಿದ್ದಾರೆ.
ಭಾರತದಲ್ಲಿ ಈಗಾಗಲೇ 2,902 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. 68ಕ್ಕೂ ಹೆಚ್ಚು ಜನರು ಈ ಸಾಂಕ್ರಾಮಿಕ ಪಿಡುಗಿಗೆ ಬಲಿಯಾಗಿದ್ದಾರೆ. ಜತೆಗೆ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಹೀಗಾಗಿ ಲಾಕ್ಡೌನ್ ಮುಂದೂಡಿಕೆಯಾಗುವ ಸಾಧ್ಯತೆ ಕಾಣುತ್ತಿದೆ.
ದೇಶದ ಹಣಕಾಸು ರಾಜಧಾನಿ ಮಹಾರಾಷ್ಟ್ರದಲ್ಲೇ 516 ಪ್ರಕರಣ ಕಂಡು ಬಂದಿದೆ. ಇಲ್ಲಿ 26 ಜನರು ಸಾವನ್ನಪ್ಪಿದ್ದಾರೆ. ತಮಿಳುನಾಡಿನಲ್ಲಿ 400ಕ್ಕೂ ಹೆಚ್ಚು ಜನರಿ ಸೋಂಕು ತಗುಲಿದೆ. ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲಿ ಹೆಚ್ಚಿನ ಜನರು ಸಾವಿನ ಮನೆ ಸೇರಿದ್ದಾರೆ.
ನೆರೆ ದೇಶಗಳ ಚಿತ್ರಣ ಹೇಗಿದೆ?
ಪಾಕಿಸ್ತಾನದಲ್ಲಿ 2,547, ಅಫ್ಘಾನಿಸ್ತಾನದಲ್ಲಿ 281, ಶ್ರೀಲಂಕಾದಲ್ಲಿ 159 ಹಾಗೂ ಮಾಲ್ಡೀವ್ಸ್ನಲ್ಲಿ 32 ಜನರಿಗೆ ಕೊರೊನಾ ಸೋಂಕು ಬಾಧಿಸಿದೆ. ಹೀಗಾಗಿ ಲಾಕ್ಡೌನ್ ಮುಂದುವರೆಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.