ಪಾಟ್ನಾ (ಬಿಹಾರ): ಭಾರಿ ಮಳೆಯಿಂದಾಗಿ ಉತ್ತರ ಭಾರತ ಅಕ್ಷರಶಃ ತತ್ತರಿಸಿದೆ. ರಾಷ್ಟ್ರ ರಾಜಧಾನಿ ದೆಹಲಿ, ವಾಣಿಜ್ಯ ನಗರಿ ಮುಂಬೈ ಮಹಾ ಮಳೆಗೆ ನಲುಗಿ ಹೋಗಿವೆ. ಇದಲ್ಲದೇ ಬಿಹಾರ ಕೂಡ ಮಳೆಗೆ ಸಿಲುಕಿ ತತ್ತರಿಸಿದೆ.
ಇನ್ನು ಬಿಹಾರದಲ್ಲಿ ಹರಿಯುವ ಜೀವನಾಡಿ ಗಂಗಾ ನದಿ ಪ್ರವಾಹದಿಂದಾಗಿ ರಾಜ್ಯದ 16ಕ್ಕೂ ಹೆಚ್ಚು ಜಿಲ್ಲೆಗಳು ಪ್ರವಾಹದಿಂದ ಎದುರಿಸುತ್ತಿವೆ. ಇದಲ್ಲದೇ ನಿನ್ನೆ ಒಂದೇ ದಿನ ಸುಮಾರು 8,358 ಮಂದಿಯನ್ನು ಪ್ರವಾಹದಿಂದಾಗಿ ಬೇರೆಡೆಗೆ ಸ್ಥಳಾಂತರಿಸಲಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಆದರೆ, ಗಂಗಾ ನದಿ ಹರಿವಲ್ಲಿ ಹೆಚ್ಚಳವಾಗುತ್ತಿರುವುದು ಪಾಟ್ನಾ ಜನತೆಗೆ ತಕ್ಷಣಕ್ಕೇನೂ ಅಪಾಯವಿಲ್ಲ ಎಂದು ಜಲಸಂಪನ್ಮೂಲ ಸಚಿವ ಸಂಜಯ್ ಕುಮಾರ್ ಜಾ ತಿಳಿಸಿದ್ದಾರೆ.
ಗಂಗಾ ನದಿ ಅಪಾಯಮಿಟ್ಟಿ ಮೀರಿ ಹರಿಯುತ್ತಿದೆ. ಇನ್ನು ಪಾಟ್ನಾದ ಹಥಿದಾ ಬಳಿ 26 ಸೆಂ.ಮೀ, ಕಹ್ಗೋನ್ ಬಳಿ 13ಸೆಂ.ಮೀಟರ್ ನಷ್ಟು ಅಪಾಯದ ಮಟ್ಟವನ್ನೂ ಮೀರಿ ಅಬ್ಬರಿಸುತ್ತಿದೆ.
ಇನ್ನು ಗಾಂಧಿಘಾಟ್ ಪ್ರದೇಶಕ್ಕೆ ಸಚಿವರು ಅಧಿಕಾರಿಗಳ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗಾಂಧಿಘಾಟ್ನಲ್ಲಿ ಅತೀ ಹೆಚ್ಚಿನ ಪ್ರವಾಹ ಮಟ್ಟ 50.52 ಮೀಟರ್ನಷ್ಟಿದ್ದು, ಸದ್ಯ ಗಂಗಾ ನದಿ ಈ ಮಟ್ಟದಿಂದ 1.82 ಮೀಟರ್ಗಿಂತ ಕೆಳಗೆ ಹರಿಯುತ್ತಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಇನ್ನು ಗಂಗಾ ನದಿ ಪ್ರವಾಹದಿಂದ ಪಾಟ್ನಾ ನಗರವನ್ನು ರಕ್ಷಿಸಲು 1976ರಲ್ಲಿ ನಿರ್ಮಿಸಲಾದ ಪಾಟ್ನಾ ಟೌನ್ ಪ್ರೊಟೆಕ್ಷನ್ ವಾಲ್ ಅನ್ನು ಪರೀಕ್ಷಿಸಿದ್ದಾರೆ.
ಇನ್ನು ಬಿಹಾರ್ನ 1,317 ಪಂಚಾಯಿತಿ ವ್ಯಾಪ್ತಿಯ 81,67,671 ಮಂದಿ ಪ್ರವಾಹದ ಹೊಡೆತಕ್ಕೆ ಸಿಲುಕಿ ಸಂತ್ರಸ್ತರಾಗಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡಿದೆ. ಅಲ್ಲದೇ ಈವರೆಗೆ 25 ಮಂದಿ ಪ್ರವಾಹಕ್ಕೆ ಸಿಲುಕಿ ಅಸುನೀಗಿದ್ದಾರೆ ಎಂದು ವಿಪತ್ತು ನಿರ್ವಹಣ ಇಲಾಖೆ ಮಾಹಿತಿ ನೀಡಿದೆ. ಅಲ್ಲದೇ ರಾಜ್ಯದಲ್ಲಿ 12 ಪರಿಹಾರ ಕೇಂದ್ರಗಳು ತೆರೆಯಲಾಗಿದ್ದು, ಎನ್ಡಿಆರ್ಎಫ್ ಹಾಗೂ ಎಸ್ಡಿಆರ್ಎಫ್ನ 27 ತಂಡ ಸುಮಾರು 5.50 ಲಕ್ಷ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿವೆ. ಇದಲ್ಲದೇ ಇದೀಗ ಕೇವಲ 6 ಪರಿಹಾರ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ 5,198 ಮಂದಿ ಆಶ್ರಯ ಪಡೆದಿದ್ದಾರೆ.