ಮುಂಬೈ: ವಾಣಿಜ್ಯ ನಗರಿ, ನೆರೆಯ ಮಹಾರಾಷ್ಟ್ರದ ರಾಜಧಾನಿಯಲ್ಲಿ ವರುಣನ ಆರ್ಭಟ ಮುಂದುವರಿದಿದೆ. ಮುಂಬೈ ನಗರದ ಹಲವೆಡೆ ರಸ್ತೆಗಳು, ಜಲಾವೃತವಾಗಿವೆ. ಕೆಲವೆಡೆ ಮನೆಗಳಿಗೆ ನೀರು ನುಗ್ಗಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ.
ಮುಂಬೈ ನಗರ ಮತ್ತು ಉಪ ನಗರಗಳಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಬಾಂಬೆ ಹೈಕೋರ್ಟ್, ವರ್ಚುವಲ್ ಸೇರಿದಂತೆ ಎಲ್ಲಾ ವಿಚಾರಣೆಗಳನ್ನು ಇಂದು ರದ್ದು ಮಾಡಿದೆ.
ಆದರೆ, ಡ್ರಗ್ಸ್ ನಂಟಿನ ಆರೋಪದ ಪ್ರಕರಣ ಎದುರಿಸುತ್ತಿರುವ ನಟಿ ರಿಯಾ ಚಕ್ರವರ್ತಿ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸಾರಂಗ್ ಕೊತ್ವಾನ್ ನೇತೃತ್ವದ ಏಕಸದಸ್ಯ ಪೀಠ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ನಗರದಲ್ಲಿ ವಾಹನ ಸಂಚಾರ, ರೈಲು ಸೇವೆಗೂ ಮಳೆ ಅಡ್ಡಿಯಾಗಿದೆ. ಸಬ್‌ಅರ್ಬನ್ ರೈಲು ಸಂಚಾರವನ್ನು ರದ್ದು ಮಾಡಲಾಗಿದೆ. ಛತ್ರಪತಿ ಶಿವಾಜಿ ಮಹಾರಾಜ್ ರೈಲು ನಿಲ್ದಾಣದಿಂದ ವಿವಿಧ ನಗರಗಳಿಗೆ ಸಂಚರಿಸಬೇಕಿದ್ದ ರೈಲುಗಳನ್ನ ಸ್ಥಗಿತಗೊಳಿಸಲಾಗಿದೆ. ಸಿಎಸ್‌ಎಂಟಿ-ಕೆಎಸ್‌ಆರ್ ಬೆಂಗಳೂರು ವಿಶೇಷ ರೈಲು, ಸಿಎಸ್‌ಎಂಟಿ-ಲಖನೌ ವಿಶೇಷ ರೈಲುಗಳನ್ನು ರಿಶೆಡ್ಯುಲ್ ಮಾಡಲಾಗಿದೆ. ಉಪ ನಗರ ರೈಲು ಸೇವೆಯ ವೇಳಾಪಟ್ಟಿಯಲ್ಲೂ ಬದಲಾವಣೆ ಮಾಡಲಾಗಿದೆ.
ಇಂದು ಕೂಡ ಮುಂಬೈ ನಗರದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹಾವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ.