ಕೋಲ್ಕತ್ತಾ: ಬುಧವಾರ ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಿದ ಅಂಫಾನ್ ಚಂಡಮಾರುತ ರಾಜ್ಯದಲ್ಲಿ 72 ಮಂದಿಯನ್ನು ಬಲಿತೆಗೆದುಕೊಂಡಿದೆ. ಭಾರಿ ಮಳೆಯ ಜೊತೆಗೆ ಗಂಟೆಗೆ 155 ರಿಂದ 185 ಕಿ.ಮೀ ವೇಗದಲ್ಲಿ ಬೀಸಿರುವ ಬಿರುಗಾಳಿಯು ಕೋಲ್ಕತ್ತಾ, ಹೌರಾ, ಹೂಗ್ಲಿ, ಉತ್ತರ ಹಾಗೂ ದಕ್ಚಿಣ 24 ಪರಗಣ ಜಿಲ್ಲೆಗಳಲ್ಲಿ ತೀವ್ರ ಹಾನಿಯನ್ನುಂಟು ಮಾಡಿದೆ.
ಚಂಡಮಾರುತದಿಂದಾಗಿ ಉತ್ತರ 24 ಪರಗಣ ಜಿಲ್ಲೆಗಳಲ್ಲಿ, ಅನೇಕ ಮರಗಳು ಧರೆಗುರುಳಿಬಿದ್ದಿದ್ದು, ಸುಮಾರು 5000 ಮನೆಗಳಿಗೆ ಹಾನಿಯಾಗಿವೆ. ರಾಜ್ಯ ಸಚಿವಾಲಯ ನಬಣ್ಣಾ ಕಟ್ಟಡದೊಳಗೆ ಸಹ ಹಾನಿಯಾಗಿದೆ.
ಈ ಕುರಿತು ಮಾತನಾಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿರುಗಾಳಿಯಿಂದಾಗಿ ಸಂಪರ್ಕಗಳೆಲ್ಲಾ ಕಡಿತಗೊಂಡಿದ್ದರಿಂದ ನಮಗೆ ಸರಿಯಾದ ವರದಿ ಸಿಗುತ್ತಿಲ್ಲ. ಆದರೆ ಸಾವಿರಾರು ಕೋಟಿ ರೂ. ಆಸ್ತಿ-ಪಾಸ್ತಿ ಹಾನಿಯಾಗಿದೆ. ಈ ಕುರಿತು ನಿಖರ ಮಾಹಿತಿ ತಿಳಿಯಲು 3-4 ದಿನಗಳು ಬೇಕು. ಅನೇಕ ಬ್ರಿಡ್ಜ್ಗಳು ಸಂಪೂರ್ಣವಾಗಿ ನಾಶವಾಗಿದೆ ಎಂದು ಹೇಳಿದ್ದಾರೆ.
ಮಾನವೀಯತೆಯ ಆಧಾರದ ಮೇಲೆ ನಮ್ಮ ರಾಜ್ಯಕ್ಕಾಗಿರುವ ಹಾನಿಯ ವ್ಯಾಪ್ತಿಯನ್ನು ಗಣನೆಗೆ ತೆಗೆದುಕೊಳ್ಳುವಂತೆ ನಾವು ಕೇಂದ್ರವನ್ನು ಕೇಳುತ್ತೇವೆ. ಸೈಕ್ಲೋನ್ಗೆ ಬಲಿಯಾದವರ ಸಂಖ್ಯೆಯು ರಾಜ್ಯದಲ್ಲಿ ಕೋವಿಡ್ -19 ನಿಂದ ಮೃತಪಟ್ಟಿರುವವರ ಸಂಖ್ಯೆಯನ್ನೂ ಮೀರಬಹುದು ಎಂದು ಸಿಎಂ ತಿಳಿಸಿದ್ದಾರೆ.
ಕೋಲ್ಕತ್ತಾದ ವಿಮಾನ ನಿಲ್ದಾಣ ರಸ್ತೆಯಲ್ಲಿ ಹಾಗೂ ವಿವಿಧೆಡೆ ರಸ್ತೆ ತೆರವು ಕಾರ್ಯಾಚರಣೆ ಹಾಗೂ ದುರಸ್ತಿ ಕಾರ್ಯವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಸಿಬ್ಬಂದಿ ಮುಂದುವರೆಸಿದ್ದಾರೆ ಎಂದು NDRF ಮುಖ್ಯಸ್ಥ ಎಸ್.ಎನ್. ಪ್ರಧಾನ್ ಹೇಳಿದ್ದಾರೆ.