ನವದೆಹಲಿ: ದುಬೈನಲ್ಲಿರುವ ವ್ಯಕ್ತಿಯೊಬ್ಬರು ತಮ್ಮ ದೆಹಲಿಯ ನಿವಾಸದಲ್ಲಿನ ಕಳ್ಳತನವನ್ನು ತಂತ್ರಜ್ಞಾನದ ಮೂಲಕ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ತಮ್ಮ ದೆಹಲಿ ನಿವಾಸಕ್ಕೆ ದರೋಡೆ ಮಾಡಲು ಬಂದ ಕಳ್ಳರ ಬಗ್ಗೆ ಮನೆಯನ್ನು ನೋಡಿಕೊಳ್ಳಲು ನಿಯೋಜಿಸಿದ್ದ ಹೌಸ್‌ಟೇಕರ್‌ಗಳು ಹಾಗೂ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಕೂಡಲೇ ಎಚ್ಚೆತ್ತ ಹೌಸ್ ಟೇಕರ್‌ಗಳು, ಸ್ಥಳೀಯರ ನೆರವಿನಿಂದ ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇಬ್ಬರು ಚೋರರು ಅಲ್ಲಿಂದ ಪರಾರಿಯಾಗಿದ್ದರೆ ಮತ್ತಿಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಳ್ಳರು ಸಂಚು ರೂಪಿಸಿದ್ದ ವಿಷ್ಯ ಗೊತ್ತಾಗಿದ್ದೇಗೆ?
ಮಹಮ್ಮದ್ ಇಶ್ತಿಯಾಕ್ ದೆಹಲಿಯ ಇಂದಿರಾನಗರದಲ್ಲಿರುವ ನಿವಾಸಕ್ಕೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ಆ ದೃಶ್ಯಗಳನ್ನು ದುಬೈನಲ್ಲಿಂದಲೇ ವೀಕ್ಷಿಸುವಂತ ವ್ಯವಸ್ಥೆ ಮಾಡಿಕೊಂಡಿದ್ದರು. ಕಳ್ಳರು ಕಳ್ಳತನ ಮಾಡಲು ಮನೆ ಪ್ರವೇಶಿಸುತ್ತಿರುವುದು ಅರಿವಿಗೆ ಬರುತ್ತಿದ್ದಂತೆ ಹೌಸ್‌ಟೇಕರ್ ಹಾಗೂ ಪೊಲೀಸರಿಗೆ ಫೋನ್ ಮೂಲಕ ವಿಷಯ ತಿಳಿಸಿದ್ದಾರೆ.
ಕಳೆದ ಸೆಪ್ಟೆಂಬರ್‌ನಿಂದ ಇಶ್ತಿಯಾಕ್ ಭಾರತಕ್ಕೆ ವಾಪಸ್ ಆಗಲು ಸಾಧ್ಯವಾಗಿರಲಿಲ್ಲ. ಆದರೆ ಮನೆಯನ್ನು ನೋಡಿಕೊಳ್ಳಲು ಕೆಲ ಸಿಬ್ಬಂದಿಯನ್ನು ನಿಯೋಜಿಸಿದ್ದರು. ಕಳ್ಳರನ್ನು ರೆಡ್‌ಹ್ಯಾಂಡ್ ಆಗಿ ಹಿಡಿದುಕೊಂಡಿರುವುದಾಗಿ ಮನೆ ನೋಡಿಕೊಳ್ಳುತ್ತಿದ್ದ ಸಿಬ್ಬಂದಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.