ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ರೂಪಿಸಿರುವ ಆರೋಗ್ಯ ಸೇತು ಆ್ಯಪ್ ಮಾದರಿಯ ಕೆಲ ನಕಲಿ ಆ್ಯಪ್ಗಳು ಇಂಟರ್ನೆಟ್ನಲ್ಲಿ ಹರಿದಾಡುತ್ತಿರುವ ಬಗ್ಗೆ ವರದಿಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಅಸಲಿ ಆರೋಗ್ಯ ಸೇತು ಯಾವುದೆಂದು ಕಂಡು ಹಿಡಿಯುವುದು ಹೇಗೆ ಎಂಬುದರ ಕುರಿತು ಹೈದರಾಬಾದ್ ರಾಚಕೊಂಡ ಪೊಲೀಸ್ ಅಸಿಸ್ಟಂಟ್ ಕಮೀಷನರ್ ಎಸ್. ಹರಿನಾಥ ಕೆಲ ಟಿಪ್ಸ್ ನೀಡಿದ್ದಾರೆ.
ಅಸಲಿ ಆರೋಗ್ಯ ಸೇತು ಆ್ಯಪ್ ಇಲ್ಲಿಂದ ಮಾತ್ರ ಡೌನ್ಲೋಡ್ ಮಾಡಬಹುದು:
- ಐಫೋನ್ಗಾಗಿ ಆ್ಯಪ್ ಸ್ಟೋರ್ನಲ್ಲಿ
- ಆ್ಯಂಡ್ರಾಯ್ಡ್ ಫೋನ್ಗಾಗಿ ಪ್ಲೇ ಸ್ಟೋರ್ನಲ್ಲಿ
ಮೇಲಿನ ಪ್ಲಾಟ್ಫಾರ್ಮ್ಗಳಲ್ಲಿ ವಂಚಕರು ನಕಲಿ ಆ್ಯಪ್ ಹರಿಬಿಡದಂತೆ ಕೇಂದ್ರ ಸರ್ಕಾರ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಆದರೂ ಬೇರೆ ಮಾರ್ಗಗಳ ಮೂಲಕ ಸೈಬರ್ ಖದೀಮರು ನಕಲಿ ಆ್ಯಪ್ಗಳನ್ನು ಜನರ ಮುಂದೆ ತರುತ್ತಿದ್ದಾರೆ. ಆರೋಗ್ಯ ಸೇತು ಆ್ಯಪ್ ಲೋಗೊ ಹೋಲುವ ನಕಲಿ ಆ್ಯಪ್ನ ಸ್ಪ್ಯಾಮ್ ಮೆಸೇಜ್ಗಳು ಹಾಗೂ ಇಮೇಲ್ಗಳನ್ನು ಕಳುಹಿಸುವ ಮೂಲಕ ಜನರನ್ನು ವಂಚಿಸಲು ಯತ್ನಿಸಲಾಗುತ್ತಿದೆ.
ಆರೋಗ್ಯ ಸೇತು ಆ್ಯಪ್ನ ನಿಖರ ಸ್ಪೆಲ್ಲಿಂಗ್ ನೋಡಿ ಖಚಿತಪಡಿಸಿಕೊಳ್ಳಿ:
ಸರಿಯಾದ ಸ್ಪೆಲ್ಲಿಂಗ್: Aarogya Setu App
ತಪ್ಪು ಸ್ಪೆಲ್ಲಿಂಗ್: Arogya Setu App
ಆ್ಯಪ್ ಸ್ಟೋರ್ ಹಾಗೂ ಪ್ಲೇ ಸ್ಟೋರ್ ಹೊರತುಪಡಿಸಿ ಬೇರಾವ ಮೂಲಗಳಿಂದಲೂ ಆರೋಗ್ಯ ಸೇತು ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಕೂಡದು ಎಂಬುದು ಗಮನದಲ್ಲಿರಲಿ.