ಅಂಬಾಲಾ (ಹರಿಯಾಣ): ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೋರ್ವಳ ಸೀರೆಯಲ್ಲಿ ಮೈ ಜುಂ ಎನಿಸುವ ಡೇಂಜರಸ್ ಸ್ಟಂಟ್ ವಿಡಿಯೋ ವೈರಲ್ ಆಗಿದ್ದು, ಆದಕ್ಕೆ ಸಿಕ್ಕಾಪಟ್ಟಿ ಜನರು ಫಿದಾ ಆಗಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಈಟಿವಿ ಭಾರತ ಪಾರುಲ್ ಅರೋರಾ ಜತೆ ಮಾತನಾಡಿದ್ದು, ಆಕೆ ರಾಷ್ಟ್ರೀಯ ಮಟ್ಟದ ಜಿಮ್ನಾಸ್ಟಿಕ್ ಆಟಗಾರ್ತಿ ಎಂಬ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಅನೇಕ ಚಾಂಪಿಯನ್ಶಿಪ್ಗಳಲ್ಲಿ ಭಾಗವಹಿಸಿ ಪದಕ ಗೆದ್ದಿದ್ದಾರೆ. ಎರಡು ವರ್ಷಗಳ ಹಿಂದೆ ಜಿಮ್ನಾಸ್ಟಿಕ್ ತೊರೆದಿರುವ ಅವರು, ಇದೀಗ ಇತರೆ ಮಹಿಳೆಯರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾಳೆ.
ಪಾರುಲ್ ಅವರ ಅಕ್ಕ ಖುಷ್ಬು ಜಿಮ್ನಾಸ್ಟಿಕ್ ತರಬೇತುದಾರರಾಗಿದ್ದಾರೆ. ಇದರ ಬಗ್ಗೆ ಅವರು ಮಾತನಾಡಿ, ಜಿಮ್ನಾಸ್ಟಿಕ್ ಸ್ಟಂಟ್ ಮಾಡಲು ಪ್ರತ್ಯೇಕ ಜರ್ಸಿ ಇದೆ. ಆದರೆ ಸಹೋದರಿ ಪಾರೂಲ್ ಸೀರೆ ಉಟ್ಟು ಅಪಾಯಕಾರಿ ಸಾಹಸ ಮಾಡಿರುವುದು ನಿಜಕ್ಕೂ ಶ್ಲಾಘನೀಯ ಎಂದಿದ್ದಾರೆ.
ಓದಿ: ಸೀರೆಯುಟ್ಟು ಸ್ಟಂಟ್ ಮಾಡಿದ ಮಹಿಳೆ.. ಜಾಲತಾಣದಲ್ಲಿ ವ್ಯಾಪಕ ಮೆಚ್ಚುಗೆ..!
ಸೀರೆಯಲ್ಲಿ ಡೇಂಜರಸ್ ಸ್ಟಂಟ್ ಎಂಬ ಟ್ಯಾಗ್ ಲೈನ್ ಅಡಿ ಅರೋರಾ ಕಳೆದ ತಿಂಗಳು ಈ ವಿಡಿಯೋವನ್ನು ಇನ್ಸ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಈ ವೇಳೆ ಅವರಿಗೆ 1 ಲಕ್ಷಕ್ಕೂ ಹೆಚ್ಚು ಜನರು ಫಾಲೋ ಮಾಡಿ ಬೆಂಬಲಿಸಿದ್ದರು. ಅಪರ್ಣಾ ಜೈನ್ ಎಂಬುವವರು ಮತ್ತೆ ಈ ವಿಡಿಯೋವನ್ನು ಮೈಕ್ರೋ ಬ್ಲಾಗಿಂಗ್ನಲ್ಲಿ ಹಂಚಿಕೊಂಡಿದ್ದು, ‘ಸೀರೆಯಲ್ಲಿ ಜಿಮ್ನಾಸ್ಟಿಕ್ ಮಾಡುವಾಗ ಸೀರೆಯು ಗುರುತ್ವಾಕರ್ಷಣೆಯನ್ನು ಹೇಗೆ ತಡೆಯುತ್ತದೆ ಎಂಬುದನ್ನು ನೋಡಲು ನಾನು ಈ ವಿಡಿಯೋವನ್ನು ಮೂರು ಬಾರಿ ನೋಡಿದೆ’ ಎಂದು ಬರೆದುಕೊಂಡಿದ್ದಾರೆ. ಪಾರುಲ್ ಅವರ ತಂದೆ ಚಹಾ ಅಂಗಡಿ ನಡೆಸುತ್ತಿದ್ದರು. ಆದರೆ ಎರಡು ಸಲ ಹೃದಯಾಘಾತವಾದ ಕಾರಣ ಅವರು ಮನೆಯಲ್ಲೇ ಜೀವನ ನಡೆಸುತ್ತಿದ್ದಾರೆ.
ಇನ್ನು ಹರಿಯಾಣ ಸರ್ಕಾರದ ಬಳಿ ಮನವಿ ಮಾಡಿಕೊಂಡಿರುವ ಪಾರುಲ್, ತಮಗೆ ಯಾವುದಾದರೂ ಸರ್ಕಾರಿ ಕೆಲಸ ನೀಡುವಂತೆ ತಿಳಿಸಿದ್ದಾರೆ.