ತ್ರಿಶೂರ್: ಎರಡು ತಿಂಗಳ ಹಿಂದೆ ಶಸ್ತ್ರಚಿಕಿತ್ಸೆಗೊಳಗಾಗಿದ್ದ ವ್ಯಕ್ತಿಯೋರ್ವನ ಹೊಟ್ಟೆಯಲ್ಲಿ ಎರಡು ಕತ್ತರಿಗಳು ಸಿಕ್ಕಿದ್ದು, ವೈದ್ಯಕೀಯ ಕಾಲೇಜಿನ ನಿರ್ಲಕ್ಷ್ಯ ಬಹಿರಂಗವಾಗಿದೆ.
ಕೇರಳ ತ್ರಿಶೂರ್‌ನ ಕೂರ್ಕೆಂಚೇರಿ ನಿವಾಸಿ ಜೋಸೆಫ್ ಪೌಲ್ ಎಂಬುವರು ಏ. 25 ರಂದು ತ್ರಿಶೂರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮೇದೋಜ್ಜೀರಕ ಗ್ರಂಥಿಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಎರಡು ವಾರಗಳ ನಂತರ ಮತ್ತೆ ಸಮಸ್ಯೆ ಕಂಡುಬಂದಿದ್ದರಿಂದ ಅಲ್ಟ್ರಾ-ಸೌಂಡ್ ಸ್ಕ್ಯಾನ್‌ನಲ್ಲಿ ಅದೇ ವೈದ್ಯರ ತಂಡವು ಜೋಸೆಫ್ಗೆ ಮತ್ತೊಮ್ಮೆ ಆಪರೇಷನ್ ಮಾಡಿದ್ದಾರೆ.
ಆದರೆ ಎರಡು ತಿಂಗಳು ಕಳೆದರೂ ಜೋಸೆಫ್ಗೆ ಶಸ್ತ್ರಚಿಕಿತ್ಸೆಯ ನೋವು ಕಡಿಮೆ ಆಗಲೇ ಇಲ್ಲ. ಹೀಗಾಗಿ ಇವರು ಬೇರೊಂದು ಖಾಸಗಿ ಆಸ್ಪತ್ರೆಯನ್ನು ಸಂಪರ್ಕಿಸಿದ್ದರು. ಆಗ ಜೋಸೆಫ್ಗೆ ತಮ್ಮ ಹೊಟ್ಟೆಯಲ್ಲಿ ಎರಡು ಕತ್ತರಿಗಳಿವೆ ಎಂಬ ವಿಚಾರ ತಿಳಿದು ಬಂದಿದೆ. ಇದಕ್ಕೆ ಈ ಹಿಂದೆ ಆಪರೇಷನ್ ಮಾಡಿದ ವೈದ್ಯರ ನಿರ್ಲಕ್ಷ್ಯ ಕಾರಣ ಎನ್ನುವುದು ಗೊತ್ತಾಗಿದೆ.
ಜೋಸೆಫ್ ಅವರ ಕುಟುಂಬವು ಕೇರಳ ಸಿಎಂ ಮತ್ತು ಆರೋಗ್ಯ ಸಚಿವರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.