ತಿರುವನಂತಪುರಂ( ಕೇರಳ) : ಎಲ್ಲಾ ಆರೋಗ್ಯ ನಿಯಮಾವಳಿಗಳಿಗೆ ಹೊಂದಿಕೆಯಾಗುವ ಹಾಗೆ ಮದ್ಯ ಮಾರಾಟ ಮಾಡಲು ಮಾಹಿತಿ ತಂತ್ರಜ್ಞಾನವನ್ನು ಹೇಗೆ ಬಳಸಬಹುದು ಎಂಬುದರ ಕುರಿತು ಬೆವ್ಕೊ ಸಹಾಯ ಕೋರಿದೆ.
ಮದ್ಯ ಮಾರಾಟವನ್ನು ಮಾರ್ಚ್ 25 ರಂದು ನಿಲ್ಲಿಸಿದ ನಂತರ ಅದನ್ನು ಪುನರಾರಂಭಿಸುವ ಮೊದಲ ಹೆಜ್ಜೆಯಲ್ಲಿಯೇ ಅಡೆತಡೆ ಸಂಭವಿಸಿದೆ. ಈ ಹಿನ್ನೆಲೆ ಸರ್ಕಾರಿ ಸ್ವಾಮ್ಯದ ಕೇರಳ ರಾಜ್ಯ ಪಾನೀಯಗಳ ನಿಗಮ (ಬೆವ್ಕೊ) ಮಾಹಿತಿ ಮತ್ತು ತಂತ್ರಜ್ಞಾನದ ಮೊರೆ ಹೋಗಿದೆ.
ಬೆವ್ಕೊ ಮುಖ್ಯಸ್ಥರಾದ ಸ್ಪಾರ್ಜನ್ ಕುಮಾರ್ ಅವರು ಆನ್ಲೈನ್ನಲ್ಲಿ ಮದ್ಯ ಮಾರಾಟ ಮಾಡಲು ರಾಜ್ಯ-ಸ್ಟಾರ್ಟ್ ಅಪ್ ಮಿಷನ್ ಅನ್ನು ಸಂಪರ್ಕಿಸಿದ್ದಾರೆ. ಇನ್ನು ಹಣದ ಕೊರತೆಯಿಂದ ರಾಜ್ಯ ತತ್ತರಿಸಿದೆ. ಕಳೆದ ತಿಂಗಳು ರಾಜ್ಯ ಸರ್ಕಾರವು ವಿವಿಧ ಮೂಲಗಳಿಂದ ಕೇವಲ 250 ಕೋಟಿ ರೂ. ಆದಾಯ ಗಳಿಕೆ ಮಾಡಿದೆ.
ಕಳೆದ ಹಣಕಾಸು ವರ್ಷದಲ್ಲಿ ಇದು ಒಟ್ಟು 14,504.67 ಕೋಟಿ ರೂ.ಗಣಿಕೆ ಮಾಡಿ ದಾಖಲೆ ಬರೆದಿದೆ. ಈ ಹಿನ್ನೆಲೆ ಬೆವ್ಕೊಗೆ ಐಟಿ ನೀತಿ ಒಳಪಡಿಸಿದರೆ ರಾಜ್ಯದ ಹಣಕಾಸು ಸಮಸ್ಯೆಗೆ ದೊಡ್ಡ ಪರಿಹಾರವಾಗಲಿದೆ.
ರಾಜ್ಯದ 3.34 ಕೋಟಿ ಜನಸಂಖ್ಯೆಯಲ್ಲಿ ಸುಮಾರು 32.9 ಲಕ್ಷ ಜನರು ಮದ್ಯ ಸೇವಿಸುತ್ತಾರಂತೆ. ಇದರಲ್ಲಿ 29.8 ಲಕ್ಷ ಪುರುಷರು ಮತ್ತು 3.1 ಲಕ್ಷ ಮಹಿಳೆಯರು ಸೇರಿದ್ದಾರೆ ಎಂದು ಹಿಂದಿನ ಅಧ್ಯಯನವೊಂದರಲ್ಲಿ ಮಾಹಿತಿ ನೀಡಲಾಗಿದೆ.
ಕೇರಳದಲ್ಲಿ ಸುಮಾರು ಐದು ಲಕ್ಷ ಜನರು ನಿತ್ಯ ಮದ್ಯ ಸೇವಿಸುತ್ತಾರೆ. ಇದರಲ್ಲಿ 1043 ಮಹಿಳೆಯರು ಸೇರಿದಂತೆ ಸುಮಾರು 83,851 ಜನರು ಮದ್ಯದ ಚಟ ಹೊಂದಿದ್ದಾರೆ ಎಂದು ರಾಜ್ಯ ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ.