ನವದೆಹಲಿ : ರಾಜಧಾನಿಯಲ್ಲಿ ಹೆಣ್ಣು ಮಕ್ಕಳ ಮೇಲಿನ ತಾರತಮ್ಯ ನೀತಿಯನ್ನು ಕೊನೆಗೊಳಿಸಲು 2008ರಲ್ಲಿ ಮಾಜಿ ಸಿಎಂ ದಿವಂಗತ ಶೀಲಾ ದೀಕ್ಷಿತ್ ಸರ್ಕಾರ ಪ್ರಾರಂಭಿಸಿದ 'ಲಾಡ್ಲಿ' ಯೋಜನೆಗೆ ಇನ್ನಷ್ಟು ಶಕ್ತಿ ತುಂಬಲು ಕೇಜ್ರಿವಾಲ್ ಸರ್ಕಾರ ಮುಂದಾಗಿದೆ.
ಈ ಯೋಜನೆಯಡಿ ನಿರ್ಗತಿಕ ಕುಟುಂಬದಲ್ಲಿ ಹೆಣ್ಣು ಮಕ್ಕಳು ಜನಿಸಿದರೆ ಸರ್ಕಾರವು ಹಂತ ಹಂತವಾಗಿ ಅವರ ಖಾತೆಗೆ ಆರ್ಥಿಕ ಸಹಾಯದ ಹಣವನ್ನು ಜಮೆ ಮಾಡುತ್ತದೆ. ಹುಡುಗಿಗೆ 18 ವರ್ಷ ತುಂಬಿದ ಬಳಿಕ ಖಾತೆಯಲ್ಲಿರುವ ಹಣವನ್ನು ಮದುವೆ ಇನ್ನಿತರ ಕಾರ್ಯಗಳಿಗೆ ಕುಟುಂಬಸ್ಥರು ಸದುಪಯೋಗ ಮಾಡಿಕೊಳ್ಳಬಹುದು.
ಅರ್ಜಿ ಸಲ್ಲಿಸಲು 2 ತಿಂಗಳು ಕಾಲವಕಾಶ ವಿಸ್ತರಣೆ:
ಕೊರೊನಾ ಹಿನ್ನೆಲೆಯಲ್ಲಿ ಲಾಡ್ಲಿ ಯೋಜನೆಯಡಿ ವಿಧವೆಯರ ಮಕ್ಕಳು ಮತ್ತು ಅನಾಥ ಹೆಣ್ಣು ಮಕ್ಕಳ ಮದುವೆಗೆ ಒದಗಿಸಲಾದ ಹಣಕಾಸಿನ ನೆರವು ಪಡೆಯಲು ಈ ಫಾರ್ಮ್ ಭರ್ತಿ ಮಾಡುವ ದಿನಾಂಕವನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಗಸ್ಟ್ 31 ರವರೆಗೆ ವಿಸ್ತರಿಸಿದೆ. ಈ ನಡುವೆ ಲಾಡ್ಲಿ ಯೋಜನೆಯಡಿ ನೀಡಲಾಗುವ ಹಣಕಾಸಿನ ನೆರವು ಹೆಚ್ಚಿಸುವ ಬಗ್ಗೆ ಸರ್ಕಾರ ನಿರ್ಧರಿಸುವ ಸಾಧ್ಯತೆಯಿದೆ. ಲಾಡ್ಲಿ ಯೋಜನೆಯಡಿ ಜನನ ಮತ್ತು ಶಿಕ್ಷಣದ ವಿವಿಧ ಹಂತಗಳಲ್ಲಿ ಹೆಣ್ಣು ಮಕ್ಕಳ ಬ್ಯಾಂಕ್ ಖಾತೆಗೆ ಸರ್ಕಾರ ಹಣವನ್ನು ಜಮಾ ಮಾಡುತ್ತದೆ.
ತಾರತಮ್ಯವನ್ನು ಕೊನೆಗೊಳಿಸಲು ಯೋಜನೆ ಪ್ರಾರಂಭಿಸಲಾಯಿತು:
ಹೆಣ್ಣು ಮಕ್ಕಳ ಮೇಲಿನ ತಾರತಮ್ಯ ನೀತಿಯನ್ನು ಹೋಗಲಾಡಿಸಲು 2008 ರಲ್ಲಿ ಅಂದಿನ ಸಿಎಂ ಶೀಲಾ ದೀಕ್ಷಿತ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಲಾಡ್ಲಿ ಯೋಜನೆಯನ್ನು ಪ್ರಾರಂಭಿಸಿತು. ಯೋಜನೆಯಡಿ ಹೆಣ್ಣು ಮಕ್ಕಳಿಗೆ ಒಟ್ಟು 35 ರಿಂದ 36 ಸಾವಿರ ರೂ. ವರೆಗೂ ಆರ್ಥಿಕ ಸಹಾಯ ನೀಡುತ್ತದೆ.
ಲಾಡ್ಲಿ ಯೋಜನೆಯ ಫಲಾನುಭವಿಗಳು ದೆಹಲಿ ನಿವಾಸಿಯಾಗಿರಬೇಕು. ಹೆಣ್ಣು ಮಗುವಿನ ಕುಟುಂಬದ ವಾರ್ಷಿಕ ಆದಾಯ ಒಂದು ಲಕ್ಷ ಮೀರಿರಬಾರದು. ಕುಟುಂಬದಲ್ಲಿ ಇಬ್ಬರು ಹೆಣ್ಣು ಮಕ್ಕಳು ಜನಿಸಿದ ನಂತರ ಮತ್ತು ಮಗು ಅಧ್ಯಯನ ಮಾಡುವ ಶಾಲೆಯಿಂದ ಸರ್ಕಾರವು ದಾಖಲೆ ಪಡೆದ ನಂತರವೇ ಲಾಡ್ಲಿ ಯೋಜನೆಯ ಹಣವನ್ನು ಜಮಾ ಮಾಡುತ್ತದೆ. ಮಗು ಒಂದನೇ ತರಗತಿಗೆ ಸೇರ್ಪಡೆಯಾದಾಗ 5 ಸಾವಿರ ರೂ. ಆರನೇ ತರಗತಿಗೆ ಪ್ರವೇಶಿಸಿದ ಸಂದರ್ಭ 5 ಸಾವಿರ ರೂ. ಒಂಭತ್ತು, ಹತ್ತು ಮತ್ತು 12 ನೇ ತರಗತಿವರೆಗೂ ಆರ್ಥಿಕ ಸಹಾಯ ನೀಡುತ್ತದೆ.