ಹೈದರಾಬಾದ್: ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಭಾಗಿಯಾಗಿದ್ದ ತೆಲಂಗಾಣ ರಾಜ್ಯ ಸಾರಿಗೆ ನಿಗಮದ ಸುಮಾರು 48 ಸಾವಿರ ನೌಕರರನ್ನು ವಜಾ ಮಾಡುವಂತೆ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಆದೇಶ ಹೊರಡಿಸಿದ್ದು, ಸಿ.ಎಂ. ನಿರ್ಧಾರದಿಂದ ನೌಕರರು ಬೆಚ್ಚಿಬಿದ್ದಿದ್ದಾರೆ.
ಇನ್ನೊಂದೆಡೆ ಕೆಸಿಆರ್ ಅವರು ನೌಕರರು ಕರ್ತವ್ಯಕ್ಕೆ ಹಾಜರಾಗಲು ಬೆದರಿಕೆ ತಂತ್ರ ಅನುಸರಿಸುತ್ತಿದ್ದಾರಾ? ಎಂಬ ಚರ್ಚೆ ಕೇಳಿಬಂದಿದೆ.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ 48 ಸಾವಿರಕ್ಕೂ ಅಧಿಕ ತೆಲಂಗಾಣ ರಾಜ್ಯ ಸಾರಿಗೆ ಸಂಸ್ಥೆಯ ಸಿಬ್ಬಂದಿ ಶುಕ್ರವಾರ ರಾತ್ರಿಯಿಂದ ಪ್ರತಿಭಟನೆಗೆ ಆರಂಭಿಸಿದ್ದರು. ಶನಿವಾರ ಸಂಜೆ 6 ಗಂಟೆ ಒಳಗಾಗಿ ಪ್ರತಿಭಟನೆ ನಿಲ್ಲಿಸುವಂತೆ ಸರ್ಕಾರ ಗಡುವು ನೀಡಿತ್ತು. ಆದರೆ, ಗಡುವನ್ನು ಪರಿಗಣಿಸಿದ 48 ಸಾವಿರ ನೌಕರರನ್ನು ಸಿಎಂ ಕೆಸಿಆರ್ ವಜಾಗೆ ಆದೇಶಿಸಿದ್ದಾರೆ.
"ಹಬ್ಬದ ಸಮಯದಲ್ಲಿ ಬಸ್ ಚಾಲಕರು, ನಿರ್ವಾಹಕರು ಹಾಗೂ ಸಿಬ್ಬಂದಿ ಪ್ರತಿಭಟನೆ ಮಾಡುತ್ತಿರುವುದು ಅತಿದೊಡ್ಡ ಅಪರಾಧ. ಇದರಿಂದ ಸರ್ಕಾರಕ್ಕೆ 1,200 ಕೋಟಿ ರೂ. ನಷ್ಟ ಉಂಟಾಗಿದೆ. ಸಾಲದ ಮೊತ್ತ 5,000 ಕೋಟಿಗೆ ಏರಿಕೆ ಆಗಿದೆ” ಎಂದು ಸಿಎಂ ಕೆಸಿಆರ್ ಹೇಳಿದ್ದಾರೆ.
ಟಿಎಸ್ಆರ್ಟಿಸಿಯನ್ನು ಸರ್ಕಾರದ ಜೊತೆ ವಿಲೀನ, ಖಾಲಿ ಇರುವ ವಿವಿಧ ಹುದ್ದೆಗಳಿಗೆ ಸಿಬ್ಬಂದಿಯನ್ನು ನೇಮಕ ಸೇರಿದಂತೆ ವಿವಿಧ ಬೇಡಿಕೆಗಳನ್ನು ಸಾರಿಗೆ ನಿಗಮದ ಸಿಬ್ಬಂದಿ ಸರ್ಕಾರದ ಮುಂದೆ ಇರಿಸಿದ್ದರು. ಆದರೆ, ಮುಖ್ಯಮಂತ್ರಿ ಕೆಸಿಆರ್ ಇವರ ಬೇಡಿಕೆಗಳಿಗೆ ಮನ್ನಣೆ ನೀಡಿರಲಿಲ್ಲ.
“ಹಾಲಿ 1,200 ನೌಕರರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಶೀಘ್ರವೇ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಅಲ್ಲದೆ, ಯಾವುದೇ ಒಕ್ಕೂಟದ ಜೊತೆ ಇವರು ಸೇರ್ಪಡೆಯಾಗುವುದಿಲ್ಲ ಎನ್ನುವ ಬಗ್ಗೆ ಖಾತ್ರಿ ಕೊಟ್ಟ ನಂತರವೇ ಅವರನ್ನು ಕೆಲಸಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ” ಎಂದು ಸಿಎಂ ಕೆಸಿಆರ್ ಹೇಳಿದ್ದಾರೆ.
ಹಬ್ಬದ ಸಮಯವಾದ್ದರಿಂದ ಬಸ್ನಲ್ಲಿ ಜನ ಸಂಚಾರ ಹೆಚ್ಚಿರುತ್ತದೆ. ಹೀಗಾಗಿ ಹೆಚ್ಚುವರಿಯಾಗಿ 2,500 ಬಸ್ಗಳನ್ನು ತೆಲಂಗಾಣ ಸರ್ಕಾರ ಪಡೆದುಕೊಂಡಿತ್ತು. ಅಲ್ಲದೆ, 4,114 ಖಾಸಗಿ ಬಸ್ಗಳಿಗೆ ಸರ್ಕಾರದ ಪರವಾನಿಗೆ ಅಡಿಯಲ್ಲಿ ಸಂಚಾರ ಮಾಡಲು ಅವಕಾಶ ನೀಡಿತ್ತು.
ಅ.10ರ ಒಳಗಾಗಿ ಸಿಎಂ ಕೆಸಿಆರ್ ನೇತೃತ್ವದ ಸರ್ಕಾರ ಪರ್ಯಾಯ ವ್ಯವಸ್ಥೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದು ತೆಲಂಗಾಣ ಹೈಕೋರ್ಟ್ನ ರಜಾ ಅವಧಿಯ ಪೀಠ ಸರ್ಕಾರಕ್ಕೆ ಸೂಚಿಸಿದೆ.