ನವದೆಹಲಿ: ಬಹು ನಿರೀಕ್ಷಿತ ಕರ್ತಾರ್‌ಪುರ ಕಾರಿಡಾರ್ ಯೋಜನೆಯು ಇಂದು ಉದ್ಘಾಟನೆಗೊಳ್ಳಲಿದೆ. ಪಾಂಜಾಬ್ನಲ್ಲಿ ಪ್ರಧಾನಿ ಮೋದಿ ಕಾರಿಡಾರ್ನ ಭಾರತದ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಿದ್ದಾರೆ.
ಪಂಜಾಬ್ನ ಗುರ್ದಾಸ್ಪುರ್ ಜಿಲ್ಲೆಯಲ್ಲಿರುವ ದೇರಾ ಬಾಬಾ ನಾನಕ್ ಸಾಹಿಬ್ ಹಾಗೂ ಪಾಕಿಸ್ಥಾನದ ಕರ್ತಾರ್ಪುರದಲ್ಲಿರುವ ದರ್ಬಾರ್ ಸಾಹಿಬ್ ಗುರುದ್ವಾರವನ್ನು ಸಂಪರ್ಕಿಸುವ 4.7 ಕಿ.ಮೀ ಉದ್ದದ ರಸ್ತೆಯು ಭಕ್ತರ ಪ್ರಯಾಣಕ್ಕೆ ಮುಕ್ತವಾಗಲಿದೆ. ಕರ್ತಾರ್‌ಪುರ ಕಾರಿಡಾರ್ ಯೋಜನೆಯ ಈ ರಸ್ತೆಯನ್ನು ಪ್ರಧಾನಿ ನರೇಂದ್ರ ಮೋದಿ ಪಂಜಾಬ್ನ ಗುರ್ದಾಸ್ಪುರದಲ್ಲಿ ಲೋಕಾರ್ಪಣೆಗೊಳಿಸಲಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ಎರಡೂ ಕಡೆಗಳಿಂದಲೂ ಈ ಯೋಜನೆ ಉದ್ಘಾಟನೆಗೊಳ್ಳಲಿದೆ. ಪಾಕಿಸ್ತಾನದ ಕಾರ್ತಾರ್ಪುರದಲ್ಲಿ ಈ ಯೋಜನೆಯನ್ನು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಉದ್ಘಾಟನೆಗೊಳಿಸಲಿದ್ದಾರೆ.
ನವೆಂಬರ್ 12 ರಂದು ಸಿಖ್ ಧರ್ಮದ ಗುರುನಾನಕ್ ದೇವ್ ಅವರ 550 ನೇ ಜನ್ಮದಿನಕ್ಕೂ ಮೂರು ದಿನ ಮುಂಚಿತವಾಗಿ ಈ ಯೋಜನೆ ಉದ್ಘಾಟನೆಗೊಳ್ಳುತ್ತಿದೆ. ಈ ಮೂಲಕ ಪಾಕಿಸ್ತಾನದಲ್ಲಿರುವ ಕರ್ತಾರ್ಪುರ್ ಗುರುದ್ವಾರಕ್ಕೆ ಇಂದಿನಿಂದ ಭಾರತೀಯರು ನೇರವಾಗಿ ಪ್ರವೇಶಿಸಬಹುದು. ಭಾರತ ಹಾಗೂ ಪಾಕಿಸ್ತಾನ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ‘ಕರ್ತಾರ್‌ಪುರ ಕಾರಿಡಾರ್’, ಯೋಜನೆ ಮೂಲಕ ಸಿಖ್ ಸಮುದಾಯದ ದಶಕಗಳ ಬೇಡಿಕೆ ಕಾರ್ಯರೂಪಕ್ಕೆ ಬರುತ್ತಿದೆ.
ಪ್ರಧಾನಿ ಮೋದಿ ಇಂದು ಮಾಜಿ ಪ್ರಧಾನಿ ಮನ್ಮೋಹನ್ ಸಿಂಗ್, ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಸೇರಿದಂತೆ 500 ಯಾತ್ರಾರ್ಥಿಗಳ ಮೊದಲ ತಂಡದ ಕರ್ತಾರ್‌ಪುರ ಪ್ರಯಾಣಕ್ಕೆ ಹಸಿರು ನಿಶಾನೆ ತೋರಲಿದ್ದಾರೆ.
ಏನಿದು ಕರ್ತಾರ್‌ಪುರ ಕಾರಿಡಾರ್ ಯೋಜನೆ?
ಸಿಖ್ ಧರ್ಮದ ಸಂಸ್ಥಾಪಕರಾದ ಬಾಬಾ ಗುರುನಾನಕ್ ಅವರು ತಮ್ಮ ಜೀವನದ ಕೊನೆಯ 18 ವರ್ಷವನ್ನು ಈಗಿನ ಪಾಕಿಸ್ತಾನದಲ್ಲಿರುವ ಕರ್ತಾರ್ಪುರದಲ್ಲಿ ಕಳೆದಿದ್ದರು. ಹೀಗಾಗಿ ಕರ್ತಾರ್‌ಪುರ ಸಿಖ್ ಧರ್ಮದವರಿಗೆ ಪವಿತ್ರ ಸ್ಥಳ. ಭಾರತ ಮತ್ತು ಪಾಕಿಸ್ತಾನ ಗಡಿಯಿಂದ 4 ಕಿ.ಮೀ ದೂರದಲ್ಲಿರುವ ಈ ಸ್ಥಳಕ್ಕೆ ಭಾರತದಲ್ಲಿನ ಸಿಖ್ ಧರ್ಮೀಯರು ವೀಸಾ ರಹಿತವಾಗಿ ಪವಿತ್ರ ಯಾತ್ರೆಗೆ ತೆರಳುವ ಅವಕಾಶ ನೀಡುವ ಸಲುವಾಗಿ ಭಾರತ ಮತ್ತು ಪಾಕಿಸ್ತಾನ ರಾವಿ ನದಿಗೆ ಸೇತುವೆ ನಿರ್ಮಾಣ ಮಾಡುವ ಯೋಜನೆ ರೂಪಿಸಿದ್ದವು. ಈಗ ಈ ಯೋಜನೆ ಪೂರ್ಣಗೊಂಡಿದ್ದು, ಇಂದು ಉದ್ಘಾಟನೆಗೊಳ್ಳಲಿದೆ.