ನವದೆಹಲಿ: ಕರ್ತಾರ್ಪುರ ಕಾರಿಡಾರ್ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಪಾಕಿಸ್ತಾನದ ಅಧಿಕಾರಿಗಳು ಇಂದು ಅಟ್ಟಾರಿಯಲ್ಲಿ ಮಹತ್ವದ ಸಭೆ ನಡೆಸಲಿದ್ದಾರೆ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಸಿಖ್ಖರ ಪವಿತ್ರ ಕ್ಷೇತ್ರ ದರ್ಬಾರ್ ಸಾಹಿಬ್ ಗುರುದ್ವಾರದ ಭೇಟಿಗೆ ಭಾರತೀಯರಿಗೆ ಅನುವು ಮಾಡಿಕೊಡಬೇಕು ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳ ಅಧಿಕಾರಿಗಳು ಇಂದು ಮೂರನೇ ಬಾರಿಗೆ ಸಭೆ ಸೇರುತ್ತಿದ್ದಾರೆ.
ಜುಲೈ 14ರಂದು ಇದೇ ವಿಚಾರಕ್ಕೆ ಎರಡನೇ ಸಭೆ ವಾಘಾ ಪ್ರದೇಶದಲ್ಲಿ ನಡೆದಿತ್ತು. ಈ ವೇಳೆ ಭಾರತೀಯ ಅಧಿಕಾರಿಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದರು. ಪ್ರಸ್ತುತ ಪಾಕಿಸ್ತಾನ ಸರ್ಕಾರದಿಂದ ಕರ್ತಾರ್ಪುರ ವಿಚಾರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವ ಕಾರಣದಿಂದ ಇಂದಿನ ಸಭೆಯಲ್ಲಿ ಎಲ್ಲವೂ ಅಂತಿಮವಾಗುವ ಸಾಧ್ಯತೆ ಇದೆ.
ನವೆಂಬರ್ನಲ್ಲಿ ಗುರು ನಾನಕ್ 550ನೇ ಜಯಂತಿ ಆಚರಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ಮೊದಲ ವಾರದಲ್ಲಿ ಕರ್ತಾರ್ಪುರದ ದರ್ಬಾರ್ ಸಾಹಿಬ್ ಪ್ರವೇಶದ ನಿಲುವು ಅಂತಿಮಗೊಳಿಸುವಂತೆ ಭಾರತ ಪಾಕಿಸ್ತಾನಕ್ಕೆ ಮನವಿ ಮಾಡಿತ್ತು.
ಸಭೆಯ ಉದ್ದೇಶವೇನು?
- ಕರ್ತಾರ್ಪುರದ ದರ್ಬಾರ್ ಸಾಹಿಬ್ ಗುರುದ್ವಾರದಲ್ಲಿ ಸಿಖ್ಖರು ಪ್ರಸಾದವನ್ನು ತಯಾರಿಸಿ, ವಿತರಿಸಲು ಅವಕಾಶ ನೀಡುವಂತೆ ಭಾರತದ ಮನವಿ.
- ಜುಲೈ 14ರಂದು ನಡೆದ ಎರಡನೇ ಸಭೆಯಲ್ಲಿ ಭಾರತದಿಂದ ಕರ್ತಾರ್ಪುರಕ್ಕೆ ಸಂಪರ್ಕಿಸುವ 4.19ಕಿ.ಮೀ ಉದ್ದದ ಚತುಷ್ಪಥ ರಸ್ತೆಯನ್ನು ಅಕ್ಟೋಬರ್ 31ರಂದು ಪೂರ್ತಿಗೊಳಿಸುವುದಾಗಿ ಉಭಯ ದೇಶಗಳನ್ನು ಒಪ್ಪಂದ ಮಾಡಿಕೊಂಡಿದ್ದವು.
- 15 ಎಕರೆ ಪ್ರದೇಶಲ್ಲಿರುವ ಕರ್ತಾರ್ಪುರದ ದರ್ಬಾರ್ ಸಾಹಿಬ್ ಗುರುದ್ವಾರ ಮಂದಿರದ ನಿರ್ಮಾಣಕ್ಕೆ ಸುಮಾರು ₹500 ಕೋಟಿ ಖರ್ಚು ಮಾಡಲಾಗಿದೆ.
- ಕರ್ತಾರ್ಪುರಕ್ಕೆ ವೀಸಾ-ಫ್ರೀ ಪ್ರಯಾಣಕ್ಕೆ ಪಾಕಿಸ್ತಾನ ಸಮ್ಮತಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ವೀಸಾ-ಫ್ರೀ ವ್ಯವಸ್ಥೆಯ ಮೂಲಕ ಪ್ರತಿನಿತ್ಯ ಐದು ಸಾವಿರ ಮಂದಿ ಕರ್ತಾರ್ಪುರದಲ್ಲಿರುವ ಸಿಖ್ ಮಂದಿರಕ್ಕೆ ಭೇಟಿ ನೀಡಬಹುದು. ಗುಂಪಿನಲ್ಲಿ ಇಲ್ಲವೇ ಒಬ್ಬೊಬ್ಬರಾಗಿ ಮಂದಿರಕ್ಕೆ ಭೇಟಿ ಕೊಡಬಹುದು ಎಂದು ಪಾಕ್ ಸರ್ಕಾರ ಹೇಳಿದೆ.