ಕಾನ್ಪುರ್(ಉತ್ತರ ಪ್ರದೇಶ): ಅಂತ್ಯಕ್ರಿಯೆಗೂ ಮೊದಲು ಜೈಲಿನಲ್ಲಿರುವ ಕೈದಿಗೆ ವಿಡಿಯೋ ಕರೆ ಮೂಲಕ ತನ್ನ ಮಗನ ಅಂತಿಮ ದರ್ಶನಕ್ಕೆ ಜೈಲು ಅಧಿಕಾರಿಗಳು ಅವಕಾಶ ಮಾಡಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.
ಜೈಲಿನಲ್ಲಿರುವ ಅರವಿಂದ್ ಎಂಬ ಕೈದಿಯ ಐದು ವರ್ಷದ ಮಗ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ತನ್ನ ಗಂಡ ತನ್ನ ಮಗನ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಬೇಕೆಂದು ಕೈದಿಯ ಪತ್ನಿ ಅಂಜಲಿ ಬಯಸಿದ್ದರು. ಆದರೆ, ಕೈದಿಗೆ ಪೆರೋಲ್ ಸಿಗದ ಕಾರಣ ಅಧಿಕಾರಿಗಳು ಅವಕಾಶ ನೀಡಲಿಲ್ಲ.
ಹೀಗಾಗಿ ತಾಯಿ ತನ್ನ ಮಗನ ಮೃತ ದೇಹವನ್ನು ಜೈಲಿಗೆ ತಂದಿದ್ದರು. ಅಂತ್ಯಕ್ರಿಯೆಗೂ ಮೊದಲು ಅರವಿಂದ್ ಮೃತ ಮಗನನ್ನು ದೈಹಿಕವಾಗಿ ನೋಡಲು ಅವಕಾಶ ನೀಡುವಂತೆ ಅಧಿಕಾರಿಗಳಿಗೆ ವಿನಂತಿಸಿದ್ದರು. ಆದರೆ ಕೊರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕೈದಿಗಳು ಹೊರಗಿನವರನ್ನ ಭೇಟಿ ಮಾಡಲು ಅನುಮತಿ ನೀಡಲಾಗುವುದಿಲ್ಲ ಎಂದು ಅವಕಾಶ ಕಲ್ಪಿಸಿಲ್ಲ.
ಮಹಿಳೆ ಪದೇ ಪದೇ ಮನವಿ ಮಾಡಿದ ನಂತರ, ವಿಡಿಯೋ ಕರೆಯ ಮೂಲಕ ಅರವಿಂದ್ಗೆ ಮಗನ ಮೃತದೇಹ ನೋಡಲು ಅವಕಾಶ ನೀಡಲಾಗಿದೆ. ವಿಡಿಯೋ ಸಂಭಾಷಣೆಯ ದೃಶ್ಯ ನೋಡುಗರ ಕರುಳು ಹಿಂಡುವಂತಿದೆ.