ನವದೆಹಲಿ: ಸುಪ್ರೀಂಕೋರ್ಟ್ನ 47ನೇ ಮುಖ್ಯ ನ್ಯಾಯಮೂರ್ತಿಯಾಗಿ ಶರದ್ ಅರವಿಂದ್ ಬೊಬಡೆ ಇಂದು ಪ್ರಮಾಣವಚನ ಸ್ವೀಕರಿಸಿದರು.
ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ನೂತನ ಮುಖ್ಯನ್ಯಾಯಮೂರ್ತಿಗೆ ಪ್ರಮಾಣವಚನ ಬೋಧಿಸಿದರು. ಮುಂದಿನ 17 ತಿಂಗಳು ಸಿಜೆಐ ಆಗಿ ಬೊಬಡೆ ಮುಂದುವರಿಯಲಿದ್ದು, 2021ರ ಎಪ್ರಿಲ್ 23ರವರೆಗೆ ಕಾರ್ಯ ನಿರ್ವಹಿಸಲಿದ್ದಾರೆ.
ಮಹಾರಾಷ್ಟ್ರದ ನಾಗ್ಪುರದಲ್ಲಿ 1956ರ ಎಪ್ರಿಲ್ 24ರಂದು ಜನಿಸಿದ್ದ ಬೊಬಡೆ, ನಾಗ್ಪುರ ವಿಶ್ವವಿದ್ಯಾನಿಲಯದಿಂದ ಬಿಎ ಹಾಗೂ ಎಲ್ಎಲ್ಬಿ ಪದವಿ ಪಡೆದರು. 1978ರಲ್ಲಿ ಬಾರ್ ಕೌನ್ಸಿಲರ್ ಆಗಿ ಆಯ್ಕೆಯಾದರು. ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠದಲ್ಲಿ ತಮ್ಮ ವಕೀಲ ವೃತ್ತಿಯನ್ನು ಆರಂಭಿಸಿದ್ದ ಅವರು, ಸುಪ್ರೀಂಕೋರ್ಟ್ಗೆ ಬರುವ ಮುನ್ನ 21 ವರ್ಷಗಳ ಸೇವೆ ಸಲ್ಲಿಸಿದ್ದರು. 1998ರಲ್ಲಿ ಹಿರಿಯ ವಕೀಲರಾಗಿ ಸುಪ್ರೀಂಗೆ ನೇಮಕವಾಗಿದ್ದರು.
ಜಸ್ಟೀಸ್ ಬೊಬಡೆ ಅವರನ್ನು ಮಾರ್ಚ್ 29, 2000ರಂದು ಹೆಚ್ಚುವರಿ ನ್ಯಾಯಾಮೂರ್ತಿಯಾಗಿ ಬಾಂಬೆ ಹೈಕೋರ್ಟ್‌ಗೆ ನೇಮಿಸಲಾಗಿತ್ತು. ಬಳಿಕ 2012ರ ಅಕ್ಟೋಬರ್ 16 ರಂದು ಮಧ್ಯಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಎರಡು ನ್ಯಾಯ ಪೀಠದ ನೇತೃತ್ವ ವಹಿಸಿದ್ದ ಅವರು, ಚುನಾಯಿತ ಸದಸ್ಯರಿಗೆ ಬಿಸಿಸಿಐನ ವ್ಯವಹಾರ ನೋಡಿಕೊಳ್ಳಲು ಅನುವು ಮಾಡಿಕೊಡುವ ಕಚೇರಿ ರದ್ದುಗೊಳಿಸುವಂತೆ ಆಡಳಿತಾಧಿಕಾರಿಗಳ ಸಮಿತಿಗೆ (ಸಿಒಎ) ನಿರ್ದೇಶನ ನೀಡಿದ್ದರು.
ಇದೀಗ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಆಗಿದ್ದ ರಂಜನ್ ಗೊಗೊಯಿ ಅವರ ನಿವೃತ್ತಿ ಬಳಿಕ ಶರದ್ ಅರವಿಂದ್ ಬೊಬಡೆ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ.