ನವದೆಹಲಿ: ಇತ್ತೀಚೆಗಷ್ಟೇ ಅಯೋಧ್ಯೆ ಚೀಫ್ ಜಸ್ಟೀಸ್ ಕಚೇರಿಯನ್ನು RTI ವ್ಯಾಪ್ತಿಗೊಳಪಡಿಸುವುದು, ರಫೇಲ್ ಡೀಲ್ ಸೇರಿ ಪ್ರಮುಖ ಪ್ರಕರಣಗಳ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದ್ದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಇಂದು ನಿವೃತ್ತಿ ಹೊಂದಿದ್ದಾರೆ.
2018 ಅಕ್ಟೋಬರ್ 3ರಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಆಯ್ಕೆಯಾಗಿದ್ದ ನ್ಯಾ.ರಂಜನ್ ಗೊಗೊಯ್ ಹಲವು ಐತಿಹಾಸಿಕ ತೀರ್ಪುಗಳನ್ನ ನೀಡಿದ್ದಾರೆ.
ಅಯೋಧ್ಯೆ ಪ್ರಕರಣ:
ಹಲವು ದಶಕಗಳಿಂದ ಕಾಡುತಿದ್ದ ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ರಂಜನ್ ಗೊಗೊಯ್ ನೇತೃತ್ವದ ಪಂಚಪೀಠ ವಿವಾದಿತ ಭೂಮಿಯಲ್ಲಿ ರಾಮ ಮಂದಿರ ನಿರ್ಮಿಸುವಂತೆ ತೀರ್ಪು ಪ್ರಕಟಿಸಿತ್ತು. ಇದರೊಂದಿಗೆ ಮಂದಿರ ನಿರ್ಮಿಸಲು ಟ್ರಸ್ಟ್‌ವೊಂದನ್ನು ಸ್ಥಾಪಿಸಬೇಕು ಹಾಗೂ ಕೇಂದ್ರ ಸರ್ಕಾರ ಮೂರು ತಿಂಗಳಲ್ಲಿ ಯೋಜನೆ ನಿರ್ಮಿಸಬೇಕು ಎಂದು ಆದೇಶಿಸಿ ಸುನ್ನಿ ವಕ್ಫ್ ಬೋರ್ಡ್ಗೆ 5 ಎಕರೆ ಜಾಗ ನೀಡಲು ಆದೇಶಿಸಿತ್ತು. ಇದೊಂದು ಐತಿಹಾಸಿಕ ತೀರ್ಪು ಎಂದು ದೇಶದ ಜನತೆ ಮೆಚ್ಚಿದ್ದರು.
ಮುಖ್ಯ ನ್ಯಾಯಮೂರ್ತಿಗಳ ಕಚೇರಿ RTI ವ್ಯಾಪ್ತಿಗೆ:
ಮುಖ್ಯ ನ್ಯಾಯಮೂರ್ತಿಗಳ (ಸಿಜೆಐ) ಕಚೇರಿಯನ್ನು ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಯಲ್ಲಿ ತರಬೇಕೇ ಬೇಡವೇ ಎಂಬ ಬಗ್ಗೆ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಸಾಂವಿಧಾನಿಕ ಪೀಠ ಮಹತ್ವದ ತೀರ್ಪು ನೀಡಿತ್ತು. ಕೆಲ ಮಹತ್ವದ ಷರತ್ತುಗಳೊಂದಿಗೆ ಸಿಜೆಐ ಕಚೇರಿ ಮಾಹಿತಿ ಹಕ್ಕುಗಳ ಕಾಯ್ದೆ ವ್ಯಾಪ್ತಿಗೆ ಒಳಪಡಲಿದೆ ಎಂದಿತ್ತು. ಅಲ್ಲದೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸಿಜೆಐ ಕಚೇರಿ ಕೂಡಾ ಮಾಹಿತಿ ಹಕ್ಕು ಕಾಯ್ದೆಯಡಿ ಬರಲಿದೆ. ನ್ಯಾಯಾಂಗದ ಸ್ವಾತಂತ್ರ್ಯವೂ ನ್ಯಾಯಾಧೀಶರ ಖಾಸಗಿ ಹಕ್ಕು ಅಲ್ಲ. ಅದು ಅವರ ಮೇಲೆ ಸಂವಿಧಾನವು ಹೊರಿಸಿರುವ ಗುರುತರ ಜವಾಬ್ದಾರಿ ಎಂದು ನ್ಯಾಯಾಲಯ ತೀರ್ಪಿನಲ್ಲಿ ತಿಳಿಸಿತ್ತು.
ಶಬರಿಮಲೆ ವಿವಾದ:
ಸುಪ್ರೀಂಕೋರ್ಟ್ ಶಬರಿಮಲೆ ದೇಗುಲಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ಪ್ರಕಟಿಸಿತ್ತು. ಮಹಿಳೆಯ ಪ್ರವೇಶ ನಿರ್ಬಂಧಿಸಲು ಸುಪ್ರೀಂ ನಿರಾಕರಿಸಿತ್ತು. 2018ರಲ್ಲಿ ಎಲ್ಲಾ ವಯಸ್ಸಿನ ಮಹಿಳೆಯರಿಗೆ ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ಸುಪ್ರೀಂ ಹೇಳಿತ್ತು.
ಈ ತೀರ್ಪಿನ ಬಗ್ಗೆ ದೇಶಾದ್ಯಂತ ಭಾರಿ ಚರ್ಚೆಯಾಗಿ ಪರ-ವಿರೋಧಗಳು ವ್ಯಕ್ತವಾಗಿದ್ದವು. ಹೀಗಾಗಿ ತೀರ್ಪನ್ನು ಮರುಪರಿಶೀಲನೆ ನಡೆಸಬೇಕು ಎಂದು ಸುಪ್ರೀಂಕೋರ್ಟ್ಗೆ 56 ಅರ್ಜಿಗಳು ಸಲ್ಲಿಕೆಯಾಗಿದ್ದವು. ಹೀಗಾಗಿ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ವಿಸ್ತೃತ ಪೀಠಕ್ಕೆ ವರ್ಗಾಯಿಸಿದೆ.
ಕೇಂದ್ರಕ್ಕೆ ಕ್ಲೀನ್ ಚಿಟ್:
ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅವ್ಯವಹಾರ ನಡೆಸಿದೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ 2018 ಡಿಸೆಂಬರ್ 14ರಂದು ಕೇಂದ್ರ ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಿತ್ತು. ಈ ತೀರ್ಪನ್ನ ಮರು ಪರಿಶೀಲಿಸುವಂತೆ ಸಲ್ಲಿಸಲಾಗಿದ್ದ ಅರ್ಜಿಗಳನ್ನೂ ಸುಪ್ರೀಂಕೋರ್ಟ್ ವಜಾಗೊಳಿಸಿ ನವೆಂಬರ್ 14ರಂದು ಮತ್ತೆ ಕೇಂದ್ರಕ್ಕೆ ಕ್ಲೀನ್ ಚಿಟ್ ನೀಡಿದೆ.