ಬಹ್ರಾಯಿಚ್ (ಉತ್ತರ ಪ್ರದೇಶ): ಬಹ್ರಾಯಿಚ್ ಮೆಡಿಕಲ್ ಕಾಲೇಜಿನ ಕಿರಿಯ ರೆಸಿಡೆಂಟ್ ವೈದ್ಯರ ಗುಂಪೊಂದು ಸ್ಥಳೀಯ ಜಿಲ್ಲಾ ಆಸ್ಪತ್ರೆಯ ಚೀಫ್ ಫಾರ್ಮಾಸಿಸ್ಟ್ ಒಬ್ಬರನ್ನು ಮನಬಂದಂತೆ ಥಳಿಸಿದ ಘಟನೆ ನಡೆದಿದೆ. ಸಾಮಾಜಿಕ ಅಂತರ ಕಾಪಾಡಿ ಎಂದ ಮಾತ್ರಕ್ಕೆ ಕೋಪಗೊಂಡ ವೈದ್ಯರ ಗುಂಪು ಫಾರ್ಮಾಸಿಸ್ಟ್ರನ್ನು ಥಳಿಸಿದೆ ಎನ್ನಲಾಗಿದೆ.
ಜಿಲ್ಲಾ ಆಸ್ಪತ್ರೆಯ ಚೀಫ್ ಫಾರ್ಮಾಸಿಸ್ಟ್ ವೀರೇಂದ್ರ ಸಿಂಗ್ ತಮ್ಮ ಮೇಲೆ ನಡೆದ ಥಳಿತ ಪ್ರಕರಣವನ್ನು ವಿವರಿಸಿದ್ದು ಹೀಗೆ- "ನಾನು ಮಂಗಳವಾರ ಆಸ್ಪತ್ರೆಯ ಕೋಣೆಯಲ್ಲಿರುವಾಗ ಡಾ. ಹಶ್ಮತ್ ಅಲಿ, ಡಾ. ವಿಂಧ್ಯಾವಾಸಿನಿ ಮತ್ತು ಡಾ. ಅಮಿತ್ ಶುಕ್ಲಾ ಒಳಗೆ ಬಂದರು. ಸಾಮಾಜಿಕ ಅಂತರ ಕಾಪಾಡಿ ದೂರವಿರುವಂತೆ ಅವರಿಗೆ ತಿಳಿಸಿದೆ. ಕೋಪದಿಂದ ಹೊರಟು ಹೋದ ಅವರು ತಮ್ಮೊಂದಿಗೆ ಮತ್ತಷ್ಟು ಕಿರಿಯ ವೈದ್ಯರನ್ನು ಕರೆದುಕೊಂಡು ಬಂದು ನನ್ನನ್ನು ಹಾಗೂ ಸಹೋದ್ಯೋಗಿಗಳನ್ನು ಥಳಿಸಿದರು. ಇತರ ಸಹೋದ್ಯೋಗಿಗಳಾದ ದಿಲೀಪ್ ಕುಮಾರ ಹಾಗೂ ಶಕೀಲ್ ಅಹ್ಮದ ನಮ್ಮ ರಕ್ಷಣೆಗೆ ಧಾವಿಸಿದರು."
ಥಳಿತದ ಸುದ್ದಿ ಹರಡುತ್ತಿದ್ದಂತೆಯೇ ಜಿಲ್ಲಾ ಆಸ್ಪತ್ರೆಯ ಎಲ್ಲ ಸಿಬ್ಬಂದಿ ಕೆಲಸ ಬಹಿಷ್ಕರಿಸಿ ಧರಣಿ ಕುಳಿತರು. ಫಾರ್ಮಾಸಿಸ್ಟ್ ಅವರನ್ನು ಥಳಿಸಿದ ಕಿರಿಯ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಘಟನೆಯ ಕುರಿತು ತನಿಖೆ ನಡೆಸಲು ಕಮೀಟಿ ನೇಮಿಸಲಾಗಿದ್ದು, ಕಮೀಟಿಯ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮೆಡಿಕಲ್ ಕಾಲೇಜಿನ ಪ್ರಿನ್ಸಿಪಾಲ್ ಡಾ. ಎ.ಕೆ. ಸಾಹನಿ ಹೇಳಿದ್ದಾರೆ. ಥಳಿತ ಪ್ರಕರಣದ ಬಗ್ಗೆ ದೂರು ಬಂದಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.