ನವದೆಹಲಿ: ಕೋವಿಡ್-19 ಬಗ್ಗೆ ಜಾಗೃತಿ ಮೂಡಿಸಲು ಪ್ರಧಾನಿ ನರೇಂದ್ರ ಮೋದಿ ಕರೆಕೊಟ್ಟ ಜನತಾ ಕರ್ಫ್ಯೂಗೆ ದೇಶಕ್ಕೆ ದೇಶವೆ ಬೆಂಬಲಿಸಿದೆ. ಅಲ್ಲದೇ ಕೊರೊನಾ ವೈರಸ್ ವಿರುದ್ಧ ಶ್ರಮಿಸುತ್ತಿರುವ ವೈದ್ಯಕೀಯ ಸಿಬ್ಬಂದಿಗಳಿಗೆ ಚಪ್ಪಾಳೆ ತಟ್ಟಿ, ಜಾಗಟೆ-ಘಂಟೆ ಬಾರಿಸಿ ಕೃತಜ್ಞತೆ ಅರ್ಪಿಸಿದೆ.
ಇದಕ್ಕೆ ಪ್ರಶಂಸೆ ವ್ಯಕ್ತಪಡಿಸಿರುವ ಪಿಎಂ ಮೋದಿ, ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ಸಿಬ್ಬಂದಿಗೆ ನೀವೆಲ್ಲರೂ ಗೌರವ ಸಲ್ಲಿಸಿದ್ದೀರಿ. ಈ ಚಪ್ಪಾಳೆ, ಘಂಟೆಯ ಶಬ್ಧ ಧನ್ಯವಾದಗಳ ಧ್ವನಿಯಾಗಿದೆ. ದೇಶದ ಜನರಿಗೆ ಧನ್ಯವಾದಗಳು. ಒಂದು ಬಾರಿ ನಾವು ನಿರ್ಧಾರ ತೆಗೆದುಕೊಂಡರೆ ಯಾವುದೇ ಸವಾಲನ್ನಾದರೂ ಧೈರ್ಯದಿಂದ ಎದುರಿಸಲು ಸಿದ್ಧರಿದ್ದೇವೆ ಎಂಬ ಸಂದೇಶವನ್ನು ಇಂದು ದೇಶದ ಜನರು ನೀಡಿದ್ದಾರೆ. ಕೊರೊನಾ ವಿರುದ್ಧದ ಸುದೀರ್ಘ ಯುದ್ಧ ಪ್ರಾರಂಭವಾಗಿರುವಾಗ ಸ್ವಯಂ ನಿರ್ಬಂಧ ಹೇರಿಕೊಳ್ಳುವುದನ್ನು ಯಶಸ್ಸು ಎಂದು ಹೇಳಲಾಗುವುದಿಲ್ಲ. ಆದರೆ ಈ ಸುದೀರ್ಘ ಯುದ್ಧದಲ್ಲಿ ವಿಜಯ ಪ್ರಾರಂಭವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು, ಪಿಎಂ ನರೇಂದ್ರ ಮೋದಿಗೆ ಭಾರತೀಯ ವೈದ್ಯಕೀಯ ಸಂಘ ಪತ್ರ ಬರೆದಿದ್ದು, ಕೋವಿಡ್-19 ವಿರುದ್ಧ ಶ್ರಮಿಸುತ್ತಿರುವ ವೈದ್ಯರು, ನರ್ಸ್ಗಳು ಹಾಗೂ ಇತರ ಸಿಬ್ಬಂದಿಗಳಿಗೆ ಕೃತಜ್ಞತೆ ಅರ್ಪಿಸಲು ದೇಶದ ಜನತೆಯನ್ನು ಪ್ರೇರೇಪಿಸುವ ಮೋದಿ ನಡೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.