ಪುಣೆ: ಇಷ್ಟು ದಿನ ಗಡಿಯಿಂದ ದಾಟಿ ಬಂದು ಭಾರತದೊಳಗೆ ದಾಳಿ ನಡೆಸುತ್ತಿದ್ದ ಉಗ್ರ ಸಂಘಟನೆ ಜೈಷ್-ಇ-ಮೊಹಮ್ಮದ್ ಇದೀಗ ಸಮುದ್ರದ ಮೂಲಕ ಭಾರತದೊಳಗೆ ಎಂಟ್ರಿ ನೀಡಿ ದಾಳಿ ನಡೆಸಲು ಮುಂದಾಗಿದೆ ಎಂಬ ಮಾಹಿತಿ ಗುಪ್ತಚರ ಇಲಾಖೆಯಿಂದ ನೌಕಾಪಡೆಗೆ ಸಿಕ್ಕಿದೆ.
ಇದೇ ವಿಷಯವಾಗಿ ಮಾತನಾಡಿರುವ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಕರಮ್ಬೀರ್ ಸಿಂಗ್, ಜೈಷ್-ಇ-ಮೊಹಮ್ಮದ್ ಉಗ್ರರಿಗೆ ಅಂಡರ್ವಾಟರ್ ಅಟ್ಯಾಕ್ ಬಗ್ಗೆ ತರಬೇತಿ ನೀಡಲಾಗುತ್ತಿದ್ದು, ಅವರು ಭಾರತದೊಳಗೆ ನುಗ್ಗಿ ದಾಳಿ ಮಾಡುವ ಸಾಧ್ಯತೆ ಇದೆ. ಆದರೆ ಯಾವುದೇ ರೀತಿಯಲ್ಲೂ ಅವರು ಸಮುದ್ರ ದಾಟಿ ಭಾರತದೊಳಗೆ ಬರದಂತೆ ನಮ್ಮ ಯೋಧರು ಸನ್ನದ್ಧರಾಗಿದ್ದಾರೆ ಎಂದರು.
ಮಹಾರಾಷ್ಟ್ರದ ಪುಣೆಯಲ್ಲಿ 'Indian Ocean Changing Dynamic' ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು.
26/11 ಮುಂಬೈ ಟೆರರ್ ಅಟ್ಯಾಕ್ ಬಳಿಕ ಎಲ್ಲ ನೌಕಾನೆಲೆಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಇದೀಗ ಭಾರತೀಯ ನೌಕಾಪಡೆಯು ಕೋಸ್ಟ್ ಗಾರ್ಡ್, ಕಡಲ ಪೊಲೀಸರು, ರಾಜ್ಯ ಸರ್ಕಾರ ಸಮುದ್ರದಿಂದ ಯಾವುದೇ ಒಳನುಸುಳುವಿಕೆ ಉಂಟಾಗದಂತೆ ನೋಡಿಕೊಳ್ಳುತ್ತಿದೆ ಎಂದು ತಿಳಿಸಿದರು.