ಲಂಡನ್: ಕೊರೊನಾ ವೈರಸ್ ತಗುಲಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಗುಣಮುಖರಾಗಿ ಮೊದಲ ಬಾರಿಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಅಲ್ಲದೆ ಕೊರೊನಾ ವಿರುದ್ಧದ ಹೋರಾಟವನ್ನು ಇನ್ನಷ್ಟು ಪ್ರಬಲವಾಗಿ ಮಾಡಬೇಕಿದೆ ಎಂದಿದ್ದಾರೆ.
ಕೊರೊನಾ ವೈರಸ್ ಕುರಿತು ವರ್ಚುವಲ್ ಜಾಗತಿಕ ಸಮ್ಮೇಳನ ಏರ್ಪಡಿಸಲಾಗಿತ್ತು. ಬ್ರಿಟನ್ ಸೇರಿದಂತೆ ಫ್ರಾನ್ಸ್, ಜರ್ಮನಿ, ಇಟಲಿ, ನಾರ್ವೆ, ಸೌದಿ ಅರೇಬಿಯಾ ಮತ್ತು ಯೂರೋಪಿಯನ್ ಕಮಿಷನ್ ಸೇರಿದಂತೆ ಇತರೆ 8 ರಾಷ್ಟ್ರಗಳು ಈ ಸಮ್ಮೇಳನದಲ್ಲಿ ಭಾಗಿಯಾಗಿದ್ದವು.
ಈ ವೇಳೆ ಕೊರೊನಾ ವಿರುದ್ಧ ಹೋರಾಡಲು ಬ್ರಿಟನ್ ಎಂದಿಗೂ ತಯಾರಾಗಿದೆ ಎಂದ ಬೋರಿಸ್, ಇದಕ್ಕಾಗಿ ಅಗತ್ಯ ನೆರವಿನ ಪ್ರತಿಜ್ಞೆ ಮಾಡಿದರು. ಚಿಕಿತ್ಸೆಗೆ ಬೇಕಾದ ಲಸಿಕೆಗಳು ಹಾಗೂ ವೈದ್ಯಕೀಯ ನೆರವಿಗಾಗಿ 388 ಮಿಲಿಯನ್ ಪೌಂಡ್ ಹಾಗೂ ವಿಶ್ವದ ಆರ್ಥಿಕತೆಯ ದೃಷ್ಟಿಯಿಂದ 744 ಮಿಲಿಯನ್ ಪೌಂಡ್ ನೀಡಲು ಯುಕೆ ಸಿದ್ಧವಾಗಿದೆ ಎಂದು ಬೋರಿಸ್ ತಿಳಿಸಿದ್ದಾರೆ.
ಈ ಯುದ್ಧವನ್ನು ಗೆಲ್ಲಲು ನಮ್ಮೆಲ್ಲರ ಸುತ್ತ ಗಟ್ಟಿಯಾದ ಗೋಡೆಯನ್ನೇ ಕಟ್ಟಬೇಕಿದೆ. ಇದಕ್ಕಾಗಿ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ. ಅಲ್ಲದೆ ಈ ಮಹಾಮಾರಿಗೆ ಲಸಿಕೆ ಕಂಡುಹಿಡಿಯಲು ಸಾಮೂಹಿಕ ಪ್ರಯತ್ನ ಬೇಕು ಎಂದಿದ್ದಾರೆ. ಅಲ್ಲದೆ ಈ ವೈರಸ್ಗೆ ಲಸಿಕೆ ಕಂಡುಕೊಳ್ಳುವುದು ರಾಷ್ಟ್ರ ರಾಷ್ಟ್ರಗಳ ನಡುವೆ ಸ್ಪರ್ಧೆ ಏರ್ಪಡಬಾರದು. ಆದರೆ ಇದು ನಮ್ಮ ಜೀವಿತಾವಧಿಯ ಅತ್ಯಂತ ತುರ್ತು ಪ್ರಯತ್ನವಾಗಿರಬೇಕು. ಇದು ವೈರಸ್ ವಿರುದ್ಧ ಮಾನವೀಯತೆಯ ಹೋರಾಟ, ನಾವೆಲ್ಲರೂ ಒಟ್ಟಿಗೆ ಹೋರಾಡೋಣ ಎಂದಿದ್ದಾರೆ.
ಇದಕ್ಕೂ ಮೊದಲು ಟ್ರೆವೆಲಿಯನ್ ದೇಶ, ಲಸಿಕೆಗಳು ಮತ್ತು ರೋಗನಿರೋಧಕ ಶಕ್ತಿಗಾಗಿ ಜಾಗತಿಕ ಒಕ್ಕೂಟಕ್ಕೆ (ಗವಿ) 330 ದಶಲಕ್ಷ ಪೌಂಡ್ ನೆರವನ್ನು 5 ವರ್ಷದವರೆಗೆ ನೀಡುವುದಾಗಿ ಘೋಷಿಸಿದೆ. ಇದು ವಿಶ್ವದ ಬಡರಾಷ್ಟ್ರಗಳ ಸುಮಾರು 75 ಮಿಲಿಯನ್ ಮಕ್ಕಳಿಗೆ ರೋಗನಿರೋಧಕ ಶಕ್ತಿ ಚಿಕಿತ್ಸೆಗೆ ಸಹಾಯವಾಗಲಿದೆ.