ಭೋಪಾಲ್: ಪತ್ನಿ ಮೇಲೆ ಹಲ್ಲೆ ಮಾಡಿದ್ದಕ್ಕೆ ಡಿಜಿಪಿ ಪುರುಷೋತ್ತಮ್ ಶರ್ಮಾರನ್ನ ಹುದ್ದೆಯಿಂದ ಅಮಾನತುಗೊಳಿಸಿದ ಪ್ರಕರಣದ ಸಂಬಂಧ, ಇದೀಗ ಪುರುಷೋತ್ತಮ್ರ ಪತ್ನಿ ಪತಿಯ ವಿರುದ್ಧ ಎಫ್ಐಆರ್ ದಾಖಲಿಸಲು ನಿರಾಕರಿಸಿದ್ದಾರೆ.
ಮಧ್ಯಪ್ರದೇಶದ ಹಿರಿಯ ಐಪಿಎಸ್ ಅಧಿಕಾರಿ ಪುರುಷೋತ್ತಮ್ ಶರ್ಮಾ ಅವರು ತಮ್ಮ ಪತ್ನಿಯ ಮೇಲೆ ಹಲ್ಲೆ ಮಾಡಿದ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ವಿಶೇಷ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಸ್ಥಾನದಿಂದ ಅವರನ್ನು ರಾಜ್ಯ ಸರ್ಕಾರ ನಿನ್ನೆ ಅಮಾನತುಗೊಳಿಸಿತ್ತು.
ತನ್ನ ಪತ್ನಿ ಹಲ್ಲೆ ನಡೆಸಿರುವ ಕುರಿತು ಪತ್ನಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ಘಟನೆಯ ವಿಡಿಯೋವನ್ನು ಚಿತ್ರೀಕರಿಸಿ ಪುರುಷೋತ್ತಮ್ರ ಪುತ್ರ ಹರಿಬಿಟ್ಟಿದ್ದರು. ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ರೇಖಾ ಶರ್ಮಾ ಈ ಬಗ್ಗೆ ಕಠಿಣ ಕೈಗೊಳ್ಳುವಂತೆ ಮಧ್ಯಪ್ರದೇಶ ಸರ್ಕಾರಕ್ಕೆ ಪತ್ರ ಬರೆದ ಬಳಿಕ ಸರ್ಕಾರ ಈ ನಿರ್ಧಾರಕ್ಕೆ ಬಂದಿತ್ತು. ಇಂದು ಮಹಿಳಾ ಠಾಣೆ ಪೊಲೀಸರು ಪುರುಷೋತ್ತಮ್ರ ಪತ್ನಿ ಬಳಿ ತೆರಳಿ ಎಫ್ಐಆರ್ ದಾಖಲಿಸಲು ಹಾಗೂ ವೈದ್ಯಕೀಯ ಪರೀಕ್ಷೆಗೆ ಒಳಪಡಲು ತಿಳಿಸಿದ್ದು, ಇದಕ್ಕೆ ಅವರು ನಿರಾಕರಿಸಿದ್ದಾರೆ.
2008ರಲ್ಲಿ ಕೂಡ ನನ್ನ ಪತ್ನಿ ನನ್ನ ವಿರುದ್ಧ ದೂರು ನೀಡಿದ್ದಳು. ಆದರೂ ಅಂದಿನಿಂದ ಇಂದಿನ ವರೆಗೂ ಆಕೆ ಹಾಗೂ ನನ್ನ ಮಗ ನನ್ನೊಂದಿಗೇ ಇದ್ದಾರೆ. ನನ್ನ ದುಡ್ಡಲ್ಲೇ ನನ್ನ ಮಗ ವಿದೇಶಿ ಪ್ರವಾಸಗಳನ್ನ ಮಾಡಿಕೊಂಡು ಎಂಜಾಯ್ ಮಾಡುತ್ತಿದ್ದಾನೆ. ಈಗ ಇಬ್ಬರೂ ನನ್ನ ವಿರುದ್ಧ ತಿರುಗಿ ಬಿದ್ದಿದ್ದಾರೆ. ವಿಡಿಯೋದಲ್ಲಿರುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಇದು ಕೌಟುಂಬಿಕ ಕಲಹ. ಈ ಸಂಬಂಧ ನನ್ನ ಮೇಲೆ ಕಾನೂನು ಕ್ರಮ ಕೈಗೊಳ್ಳಬಹುದಿತ್ತು. ಆಕೆ ಪೊಲೀಸರಿಗೆ ದೂರು ನೀಡಬಹುದಿತ್ತು. ಅದನ್ನು ಬಿಟ್ಟು ಅಮಾನತುಗೊಳಿಸಲಾಗಿದೆ ಎಂದು ಡಿಜಿಪಿ ಪುರುಷೋತ್ತಮ್ ಹೆಂಡತಿ, ಮಗ ಹಾಗೂ ಮಧ್ಯಪ್ರದೇಶ ಸರ್ಕಾರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.