ಪ್ರಸ್ತುತ ಯುಗಮಾನದಲ್ಲಿ ಇಡೀ ವಿಶ್ವದಲ್ಲಿ ನಮ್ಮ ಭಾರತ ದೇಶವು ಅತ್ಯಂತ ಯುವ ದೇಶವಾಗಿದೆ. ಅಂದರೆ ದೇಶದಲ್ಲಿರುವ 65 ಕೋಟಿಗಿಂತಲೂ ಹೆಚ್ಚು ಸಂಖ್ಯೆಯ ಜನ 35 ವರ್ಷಕ್ಕಿಂತಲೂ ಕೆಳಗಿನವರಾಗಿದ್ದಾರೆ. ಹೀಗಾಗಿ ಭಾರತದಲ್ಲಿರುವಷ್ಟು ಸಶಕ್ತ ಹಾಗೂ ಕುಶಲ ಮಾನವ ಸಂಪನ್ಮೂಲ ವಿಶ್ವದ ಇನ್ನಾವ ರಾಷ್ಟ್ರದಲ್ಲೂ ಇಲ್ಲ! ಸದ್ಯ ಈ ಬೃಹತ್ ಯುವ ಮಾನವ ಕೋಟಿಗೆ ಬೇಕಿರುವುದು ಸೂಕ್ತ ಮಾರ್ಗದರ್ಶನ ಮಾತ್ರ.
ನನ್ನ ಭಾರತ ಶ್ರೇಷ್ಠ ಭಾರತ ಎಂಬ ಮಾತನ್ನು ಅಕ್ಷರಶಃ ಸತ್ಯವನ್ನಾಗಿಸುವ ಸಮಯ ಈಗ ಕೂಡಿ ಬಂದಿದೆ. ಭಾರತದಲ್ಲಿರುವ ಈ 65 ಕೋಟಿ ಜನಸಂಖ್ಯೆಯ ಯುವ ಶಕ್ತಿಗೆ ಒಳ್ಳೆಯ ಶಿಕ್ಷಣ ಹಾಗೂ ತರಬೇತಿ ನೀಡಿದಲ್ಲಿ ಸುಭಿಕ್ಷ ಸಮಾಜ ನಿರ್ಮಾಣವಾಗುವುದರ ಮೂಲಕ ಭಾರತವು ವಿಶ್ವದ ಸೂಪರ್ ಪವರ್ ದೇಶವಾಗಲಿದೆ. ಸೂಪರ್ ಪವರ ಎಂಬುದು ಈಗ ಬರೀ ಕನಸಲ್ಲ.. ಇನ್ನೇನು ಕೆಲ ವರ್ಷಗಳಲ್ಲೇ ಈ ಕನಸು ಸಾಕಾರವಾಗಲಿರುವುದು ಆ ಸೂರ್ಯನಷ್ಟೇ ಸತ್ಯ.. ದೇಶದ ಯುವ ಪಡೆ ಈ ಕನಸನ್ನು ನನಸು ಮಾಡುವತ್ತ ಈಗಾಗಲೇ ತನ್ನೆಲ್ಲ ಶಕ್ತಿಯೊಂದಿಗೆ ಮುನ್ನುಗ್ಗುತ್ತಿದೆ.
ಇವತ್ತು ಆಗಸ್ಟ್ 12.. ಇಂದು ವಿಶ್ವಾದ್ಯಂತ ವಿಶ್ವ ಯುವ ದಿನಾಚರಣೆ ಆಚರಿಸಲಾಗುತ್ತದೆ. ಆದರೆ ಭಾರತದ ಪಾಲಿಗೆ ಯುವ ದಿನಾಚರಣೆ ವಿಶ್ವದ ಇತರ ಎಲ್ಲ ದೇಶಗಳಿಗಿಂತಲೂ ಹೆಚ್ಚು ಮಹತ್ವ ಪಡೆದುಕೊಂಡಿದೆ. ಭಾರತದಲ್ಲಿ ಯುವ ಶಕ್ತಿಯ ಅನಾವರಣ ಹಾಗೂ ವಿಶ್ವ ಯುವ ದಿನಾಚರಣೆಯ ಬಗ್ಗೆ ಒಂದು ಕಿರುನೋಟ ಇಲ್ಲಿದೆ..
ವಿಶ್ವ ಯುವ ದಿನಾಚರಣೆಯ ಇತಿಹಾಸ..
17 ಡಿಸೆಂಬರ್ 1999 ರಂದು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಸ್ವೀಕರಿಸಲಾದ ಗೊತ್ತುವಳಿಯ ಪ್ರಕಾರ, ವಿಶ್ವಾದ್ಯಂತ ಪ್ರತಿವರ್ಷ ಆಗಸ್ಟ್ 12 ರಂದು ವಿಶ್ವ ಯುವ ದಿನ ಆಚರಿಸಲು ನಿರ್ಧರಿಸಲಾಯಿತು. ನಂತರ 12 ಆಗಸ್ಟ್ 2000 ರಲ್ಲಿ ಪ್ರಥಮ ಬಾರಿಗೆ ಯುವ ದಿನವನ್ನು ವಿಶ್ವಾದ್ಯಂತ ಆಚರಿಸಲಾಯಿತು.
ವಿಶ್ವ ಯುವ ದಿನಾಚರಣೆಯ ಚಟುವಟಿಕೆಗಳು..
ಪ್ರತಿ ವರ್ಷ ಯುವ ದಿನಾಚರಣೆಗಾಗಿ ಥೀಮ್ ಒಂದನ್ನು ವಿಶ್ವ ಸಂಸ್ಥೆ ಘೋಷಣೆ ಮಾಡುತ್ತದೆ. ಯುವ ಶಕ್ತಿಯನ್ನು ಬಿಂಬಿಸುವ ಹಲವಾರು ಕಾರ್ಯಕ್ರಮಗಳನ್ನು ವಿಶ್ವದ ನಾನಾ ರಾಷ್ಟ್ರಗಳಲ್ಲಿ ಇಂದು ಆಯೋಜಿಸಲಾಗುತ್ತದೆ. ಜಾಗೃತಿ ಜಾಥಾ, ಯುವ ಮೇಳಗಳು, ಪ್ರದರ್ಶನ, ಸಂಗೀತ ಕಾರ್ಯಕ್ರಮಗಳು ನಡೆಯುತ್ತವೆ. ದೂರದರ್ಶನ, ರೇಡಿಯೊಗಳಲ್ಲಿ ಯುವ ದಿನಾಚರಣೆಯ ಸಂವಾದಗಳು ಸಹ ಇಂದು ನಡೆಯುತ್ತವೆ.
2020ರ ವಿಶ್ವ ಯುವ ದಿನಾಚರಣೆ ಘೋಷವಾಕ್ಯ..
'ವಿಶ್ವ ಬದಲಾವಣೆಯಲ್ಲಿ ಯುವಕರ ಪಾತ್ರ' ಇದು ಈ ಬಾರಿಯ ಯುವ ದಿನಾಚರಣೆಯ ಘೋಷವಾಕ್ಯವಾಗಿದೆ. ಪ್ರಾದೇಶಿಕ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿನ ಸಕಾರಾತ್ಮಕ ಬದಲಾವಣೆಗಾಗಿ ಯುವ ಸಮುದಾಯ ಯಾವ ರೀತಿ ಕೊಡುಗೆ ನೀಡುತ್ತಿದೆ ಎಂಬುದನ್ನು ಅನಾವರಣಗೊಳಿಸುವುದು ಈ ಘೋಷವಾಕ್ಯದ ಮುಖ್ಯ ಉದ್ದೇಶವಾಗಿದೆ.
ಸೋಶಿಯಲ್ ಮೀಡಿಯಾದಲ್ಲೂ ಅಭಿಯಾನ..
#31DaysOfYOUth ಎಂಬ ಹ್ಯಾಶ್ಟ್ಯಾಗ್ ಅಡಿಯಲ್ಲಿ ಇಡೀ ಆಗಸ್ಟ್ ತಿಂಗಳಿನಾದ್ಯಂತ ಸೋಶಿಯಲ್ ಮೀಡಿಯಾ ಅಭಿಯಾನ ಜರುಗಲಿದೆ. ವಿಶ್ವಶಾಂತಿಯಲ್ಲಿ ಯುವಕರ ಪಾತ್ರ ಕುರಿತಂತೆ ಪ್ರಮುಖವಾಗಿ ಈ ಅಭಿಯಾನ ನಡೆಯಲಿದೆ.
ಭಾರತೀಯ ಯುವ ಸಮುದಾಯದ ಮೇಲೆ ಕೋವಿಡ್-19 ದುಷ್ಪರಿಣಾಮ..
ಕೋವಿಡ್-19 ಕಾರಣದಿಂದ ಹೇರಲಾಗಿದ್ದ ಲಾಕ್ಡೌನ್ ಅನ್ನು ಸದ್ಯ ಹಿಂತೆಗೆದುಕೊಳ್ಳಲಾಗಿದ್ದರೂ ದೇಶದಲ್ಲಿನ ನಿರುದ್ಯೋಗ ಪ್ರಮಾಣ ಇನ್ನೂ ಹೆಚ್ಚುತ್ತಲಿದೆ. ಮೇ 17 ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದಲ್ಲಿನ ನಿರುದ್ಯೋಗ ಪ್ರಮಾಣ ಶೇ 24 ರಷ್ಟಿತ್ತು. ಏಪ್ರಿಲ್ನಲ್ಲಿಯೂ ಇಷ್ಟೇ ಈ ಪ್ರಮಾಣ ಇಷ್ಟೇ ಇತ್ತು. ಅಂದರೆ ಲಾಕ್ಡೌನ್ ತೆಗೆದ ಮೇಲೂ ನಿರುದ್ಯೋಗ ದರ ಹಾಗೆಯೇ ಮುಂದುವರೆದಿದೆ. ಮಾರ್ಚ್ 21 ಕ್ಕೆ ನಿರುದ್ಯೋಗ ಪ್ರಮಾಣ ಶೇ 7.4 ರಷ್ಟಿತ್ತು. ಮೇ 5 ರ ಹೊತ್ತಿಗೆ ಇದು ಶೇ 25.5 ಕ್ಕೆ ಏರಿಕೆಯಾಯಿತು. ಸಮೀಕ್ಷೆಗಳ ಪ್ರಕಾರ, ಏಪ್ರಿಲ್ ತಿಂಗಳೊಂದರಲ್ಲಿಯೇ ಸುಮಾರು 2 ಕೋಟಿ 70 ಲಕ್ಷ ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಯುವಕರಿಗಾಗಿ ಕೇಂದ್ರ ಸರ್ಕಾರದ ಯೋಜನೆಗಳು..
ಪ್ರಧಾನ ಮಂತ್ರಿ ಕೌಶಲ ವಿಕಾಸ್ ಯೋಜನಾ: ಈ ಯೋಜನೆಯನ್ನು ಕೇಂದ್ರ ಸರ್ಕಾರವು 2015 ರಲ್ಲಿ ಜಾರಿಗೆ ತಂದಿತು. 2020 ರಷ್ಟೊತ್ತಿಗೆ ದೇಶದ ಒಂದು ಕೋಟಿ ಯುವಕರನ್ನು ಕೌಶಲ್ಯವಂತರನ್ನಾಗಿ ಮಾಡುವ ದೃಷ್ಟಿಕೋನದಿಂದ 2016 ರಲ್ಲಿ ಈ ಯೋಜನೆಯನ್ನು ಪುನರ್ ರಚಿಸಲಾಯಿತು. 2016 ರಿಂದ 2020ರ ಅವಧಿಯಲ್ಲಿ 73 ಲಕ್ಷ 47 ಸಾವಿರ ಯುವಕರು ಪ್ರಧಾನ ಮಂತ್ರಿ ಕೌಶಲ ವಿಕಾಸ್ ಯೋಜನೆಯಡಿ ತರಬೇತಿ ಪಡೆದುಕೊಂಡಿದ್ದು ಮಹತ್ಸಾಧನೆಯಾಗಿದೆ. ಇದಕ್ಕೆ ಹೆಚ್ಚುವರಿಯಾಗಿ ಇನ್ನೂ 137 ರೀತಿಯ ವಿಭಿನ್ನ ಕೌಶಲಗಳ ತರಬೇತಿ ಕಾರ್ಯಕ್ರಮಗಳನ್ನು ಆರಂಭಿಸಲು ತಯಾರಿಗಳು ನಡೆಯುತ್ತಿವೆ.
ಪ್ರಧಾನ ಮಂತ್ರಿ ಮುದ್ರಾ ಯೋಜನಾ: ಹೊಸ ಉದ್ಯೋಗ ಅಥವಾ ಉದ್ಯಮ ಆರಂಭಿಸಲು ಬಯಸುವ ಯುವಕರಿಗಾಗಿ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಹಾಗೂ ಅತ್ಯಂತ ಸುಲಭವಾಗಿ ಸಾಲ ನೀಡಲು ಈ ಯೋಜನೆಯನ್ನು ಆರಂಭಿಸಲಾಗಿದೆ. ಯೋಜನೆಯಡಿ ಶಿಶು, ಕಿಶೋರ ಹಾಗೂ ತರುಣ ಹೀಗೆ ಮೂರು ವಿಭಾಗಗಳಲ್ಲಿ ಸಾಲ ನೀಡಲಾಗುತ್ತದೆ. ಈ ಸಾಲ ಯೋಜನೆಯಡಿ 50 ಸಾವಿರ ರೂ.ಗಳಿಂದ 10 ಲಕ್ಷ ರೂ.ಗಳವರೆಗೆ ಸಾಲ ಪಡೆಯಬಹುದು. ಈಗಾಗಲೇ 11 ಕೋಟಿಗೂ ಅಧಿಕ ಜನ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ.
ಕೌಶಲ್ಯ ಭಾರತ ಮಿಷನ್: ರಾಷ್ಟ್ರ ವಿಕಾಸದಲ್ಲಿ ಯುವ ಕೌಶಲ್ಯದ ಪಾತ್ರಕ್ಕೆ ಒತ್ತು ನೀಡಲು ಹಾಗೂ ಕೌಶಲ್ಯ ವೃದ್ಧಿಗೆ ಯೋಜನೆಗಳನ್ನು ರೂಪಿಸಲು ಕೌಶಲ್ಯ ಭಾರತ ಮಿಷನ್ ಆರಂಭಿಸಲಾಗಿದೆ. ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ ಸೇರಿದಂತೆ ಇನ್ನೂ ಹಲವಾರು ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ಈ ಯೋಜನೆಯಡಿ ರೂಪಿಸಲಾಗುತ್ತಿದೆ.
ಮೇಕ್ ಇನ್ ಇಂಡಿಯಾ: ಮೇಕ್ ಇನ್ ಇಂಡಿಯಾ ಎಂಬುದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದೆ. ಬಂಡವಾಳ ಹೂಡಿಕೆ, ಸಂಶೋಧನಾ ಅಭಿವೃದ್ಧಿ, ಕೌಶಲ ಅಭಿವೃದ್ಧಿ, ಬೌದ್ಧಿಕ ಆಸ್ತಿ ಹಕ್ಕುಗಳ ಸಂರಕ್ಷಣೆ ಹಾಗೂ ಉಚ್ಚ ಗುಣಮಟ್ಟದ ವಸ್ತುಗಳ ನಿರ್ಮಾಣ ಈ ಯೋಜನೆಯ ಮಹತ್ವದ ಅಂಶಗಳಾಗಿವೆ. ನಿರ್ಮಾಣ, ಮೂಲಭೂತ ಸೌಕರ್ಯ ಮತ್ತು ಸೇವಾ ಕ್ಷೇತ್ರದ 25 ವಲಯಗಳನ್ನು ಈ ಯೋಜನೆಯಡಿ ಗುರುತಿಸಲಾಗಿದ್ದು, ಈ ಬಗ್ಗೆ ವೆಬ್ಸೈಟ್ನಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.
ಡಿಜಿಟಲ್ ಇಂಡಿಯಾ ಯೋಜನೆ..
ಭಾರತವನ್ನು ಅತಿದೊಡ್ಡ ಡಿಜಿಟಲ್ ಎಕಾನಮಿಯನ್ನಾಗಿಸುವ ದೃಷ್ಟಿಯಿಂದ ಡಿಜಿಟಲ್ ಇಂಡಿಯಾ ಮಿಷನ್ ಆರಂಭಿಸಲಾಗಿದೆ. ರಾಷ್ಟ್ರೀಯ ಆಪ್ಟಿಕಲ್ ಫೈಬರ್ ನೆಟ್ವರ್ಕ್ ಜಾಲದ ಮೂಲಕ ದೇಶದ ಉದ್ದಗಲಕ್ಕೂ ಇರುವ 2 ಲಕ್ಷ 50 ಸಾವಿರ ಗ್ರಾಮ ಪಂಚಾಯಿತಿಗಳಿಗೆ ಈಗಾಗಲೇ ಅತಿ ವೇಗದ ಬ್ರಾಡಬ್ಯಾಂಡ್ ಇಂಟರನೆಟ್ ಸೌಲಭ್ಯ ಕಲ್ಪಿಸಲಾಗಿದೆ. 2020ರ ಜನೇವರಿಯಲ್ಲಿರುವಂತೆ ದೇಶದ 1,34,248 ಗ್ರಾಮ ಪಂಚಾಯಿತಿಗಳು ಅತಿ ವೇಗದ ಇಂಟರ್ನೆಟ್ ಸೌಲಭ್ಯ ಪಡೆದಿದ್ದು, ಸಂಪೂರ್ಣ ಡಿಜಿಟಲ್ ಆಡಳಿತ ವ್ಯವಸ್ಥೆಯಿಂದ ಸುಸಜ್ಜಿತವಾಗಿವೆ.
ಜಗತ್ತಿನ ಅತಿ ಹೆಚ್ಚು ಪ್ರಭಾವಿ ಯುವ ನಾಯಕರು
1. ಮಲಾಲಾ ಯೂಸುಫ್ಜಾಯಿ (ಶಿಕ್ಷಣಕ್ಕಾಗಿ ಹೋರಾಡಿದ ಪಾಕಿಸ್ತಾನ ಯುವತಿ)
2. ಗ್ರೇಟಾ ಥನ್ ಬರ್ಗ್ (ಪರಿಸರ ಆಂದೋಲನ ಕಾರ್ಯಕರ್ತೆ)
3. ಆನಂದ ಕುಮಾರ್ (ಗಣಿತಜ್ಞ)
4. ಅರಣ್ಯಾ ಜೋಹರ್ (ಸೋಶಿಯಲ್ ಮೀಡಿಯಾ ಆಂದೋಲನ)
5. ಅಯಾನ್ ಚಾವ್ಲಾ (ಅತಿ ಕಿರಿಯ ಸಿಇಓ)
6. ರಿತೇಶ ಅಗರ್ವಾಲ್ (ಓಯೋ ರೂಮ್ಸ್ ಸಿಇಓ)
7. ಅಫ್ರೋಜ್ ಶಾ (ಪರಿಸರಾಂದೋಲನ ಕಾರ್ಯಕರ್ತ)
8. ಪಿವಿ ಸಿಂಧು (ಬ್ಯಾಡ್ಮಿಂಟನ್ ಆಟಗಾರ್ತಿ)
9. ಅದಿತಿ ಗುಪ್ತಾ (ಬರಹಗಾರ್ತಿ)
10. ಲಕ್ಷ್ಮಿ ಅಗರ್ವಾಲ್ (ಆ್ಯಸಿಡ್ ಸಂತ್ರಸ್ತರ ಹಕ್ಕುಗಳಿಗಾಗಿ ಹೋರಾಟ)