''ಎಳೆಯ ತರು ದಿನದಿನವು ಹೊಸತಳಿರ ತಳೆವಂತೆ
ತಿಳಿನೀರು ಚಿಲುಮೆಯಲಿ ನಿಲದುಕ್ಕುವಂತೆ
ಎಳೆ ಮಕ್ಕಳೊಳು ತಿಳಿವು ಮೊಳೆತು ಬೆಳೆವುದು ನೋಡು
ಇಳೆಯೊಳಗದೊಂದು ಸೊಗ''
'ಒಂದು ಚಿಕ್ಕ ಗಿಡ ಪ್ರತಿನಿತ್ಯ ಹೊಸ ಚಿಗುರನ್ನು ತಳೆವಂತೆ, ಭೂಮಿಯಲ್ಲಿರುವ ನೀರ ಚಿಲುಮೆಯಲ್ಲಿ ನಿಲ್ಲದೆ ತಿಳಿನೀರುಕ್ಕುವಂತೆ, ಎಳೆಯ ಮಕ್ಕಳಲ್ಲಿ ಪ್ರತಿ ನಿತ್ಯ ಹೊಸತನ್ನು ಅರಿತುಕೊಳ್ಳುವಿಕೆ ನಿರಂತರವಾಗಿ ನಡೆದೇ ಇರುತ್ತದೆ. ಈ ನಿರಂತರ ಅರಿತುಕೊಳ್ಳುವಿಕೆ ಈ ಜಗತ್ತಿನಲ್ಲಿ ಬಹಳ ಸೊಗಸಾದ ವಿಚಾರ' ಎಂಬುದು ಡಿವಿಜಿ ಅವರು ತಮ್ಮ ಕಗದಲ್ಲಿ ಪ್ರಸ್ತಾಪಿಸಿದ್ದಾರೆ. ಆಧುನಿಕ ಡಿಜಿಟಲೀಕರಣದಿಂದ ಬಸವಳಿದ ಚಿಣ್ಣರ ಬದುಕಿಗೆ ಅವರ ಪೋಷಕರು ಪ್ರಕೃತಿದತ್ತವಾದ ತಿಳಿನೀರುಕ್ಕುವಂತಹ ಕೌಶಲ್ಯದ ರಂಗು ತುಂಬಿ ಬೆಳಸಲಿ.
ವಿಶ್ವದ ಎಲ್ಲ ಜನಾಂಗ, ಧರ್ಮ, ಸಂಸ್ಕೃತಿ ಮತ್ತು ರಾಷ್ಟ್ರೀಯತೇಯಲ್ಲಿ ಮಕ್ಕಳಿಗೆ ಮೊದಲ ಪಾಠ ಶಾಲೆ ಮನೆ ಹಾಗೂ ಪೋಷಕರು. ಮಕ್ಕಳನ್ನು ಸಂತೋಷವಾಗಿಡವುದು, ಅವರನ್ನ ಜೀವನವನ್ನು ಉತ್ತಮಗೊಳಿಸಿ ರೂಪಿಸುವುದು ಎಲ್ಲ ಪೋಷಕರ ಜವಾಬ್ದಾರಿ ಆಗಿದೆ. ಪ್ರತಿ ವರ್ಷ ಜುಲೈ ನಾಲ್ಕನೇ ಭಾನುವಾರವನ್ನು ಅಂತಾರಾಷ್ಟ್ರೀಯ ಪೋಷಕರ ದಿನಾಚರಣೆಯನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
ಮೇ ತಿಂಗಳಲ್ಲಿ ತಾಯಂದಿರ ದಿನ ಮತ್ತು ಜೂನ್‌ನಲ್ಲಿ ತಂದೆಯ ದಿನವನ್ನು ಆಚರಿಸಿ ಜುಲೈನಲ್ಲಿ ಹೆತ್ತವರನ್ನು ಒಟ್ಟುಗೂಡಿಸಿ ಇಂಟರ್ನ್ಯಾಷನಲ್ ಪೇರೆಂಟ್ಸ್ ಡೇ ಎಂದು ಸಂಭ್ರಮಿಸುತ್ತೇವೆ. ಈ ದಿನದಂದು ವಿಶ್ವದೆಲ್ಲೆಡೆ ಇರುವ ಪೋಷಕರನ್ನು ಹೊಗಳಲು ಒಂದು ಅವಕಾಶ. ಮಕ್ಕಳ ಮೇಲಿರುವ ನಿಸ್ವಾರ್ಥ ಬದ್ಧತೆ ಮತ್ತು ಉತ್ತಮ ಸಂಬಂಧವನ್ನು ಬೆಳೆಸಲು ಅವರು ಜೀವಮಾನ ಪೂರ್ತಿ ತಾಗ್ಯ ಮಾಡುವುದನ್ನು ಸ್ಮರಿಸಿಕೊಳ್ಳಲು ಇದೊಂದು ದಿನವಾಗಿದೆ.
ನಾವು ನಮ್ಮ ಪೋಷಕರ ನಡವಳಿಕೆಯ ಪ್ರತಿಬಿಂಬವಾಗಿರುತ್ತೇವೆ. ನಮ್ಮ ಜೀವನದುದ್ದಕ್ಕೂ ಪೋಷಕರು ನಮ್ಮನ್ನು ಸ್ವತಂತ್ರ ಚಿಂತನೆಯ ವ್ಯಕ್ತಿಗಳಾಗಿ ಕರೆದೊಯ್ಯುತ್ತಾರೆ. ನಮ್ಮ ಪಾಲನೆಯಲ್ಲಿ ಪೋಷಕರದ್ದು ನಿರ್ಣಾಯಕ ಪಾತ್ರವು ಮಹತ್ವದ್ದಾಗಿದೆ. ಮಕ್ಕಳ ಪೋಷಣೆ ಮತ್ತು ರಕ್ಷಣೆಯ ಪ್ರಾಥಮಿಕ ಜವಾಬ್ದಾರಿಯನ್ನು ಪೋಷಕರು ಹೊಂದಿದ್ದಾರೆ. ಮಕ್ಕಳು ಎಂದಿಗೂ ಕುಟುಂಬದ ವಾತಾವರಣ, ಸಂತೋಷ, ಪ್ರೀತಿ ಹಾಗೂ ಅರ್ಥ ಮಾಡಿಕೊಂಡು ಹೋಗುವಂತಹ ಉತ್ತಮ ವಾತಾವರಣದಲ್ಲಿ ಬೆಳೆಯಬೇಕು.
ಮನಷ್ಯನ ಶೇಯಾಭಿವೃದ್ಧಿಯಲ್ಲಿ ಪೋಷಕರ ಪಾತ್ರ ಮುಖ್ಯವಾಗಿದೆ ಎಂಬ ಸಂದೇಶವನ್ನು ಪೋಷಕರ ದಿನ ಸಾರುತ್ತದೆ. 1994ರಲ್ಲಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅಮೆರಿಕದ ಕಾಂಗ್ರೆಸ್ ಪ್ರತಿನಿಧಿ, ಜುಲೈ ನಾಲ್ಕನೇ ಭಾನುವಾರವನ್ನು ಪೋಷಕರ ದಿನವನ್ನಾಗಿ ಆಚರಿಸುವ ನಿರ್ಣಯಕ್ಕೆ ಸಹಿ ಹಾಕಿದರು. ಈ ದಿನ ತಾಯಿ- ತಂದೆಯ ದಿನವನ್ನು ಹೋಲುತ್ತದೆ. ಮಕ್ಕಳ ಪಾಲನೆಯಲ್ಲಿ ಪೋಷಕರ ಪಾತ್ರವನ್ನು ಗುರುತಿಸುವುದು. ಅವರ ಸ್ಥಾನವನ್ನು ಇನ್ನಷ್ಟು ಉನ್ನತಿಗೇರಿಸುವುದು ಮತ್ತು ಅವರಿ ಬೆಂಬಲವಾಗಿ ನಿಲ್ಲುವುದು ಇದರ ಮುಖ್ಯ ಧ್ಯೇಯವಾಗಿದೆ.
ಪೋಷಕರ ದಿನವನ್ನು ಜಗತ್ತಿನಾದ್ಯಂತ ಇರುವ ಪೋಷಕರಿಗೆ ಸಮರ್ಪಿಸಲಾಗಿದೆ. ಕುಟುಂಬ ಬಂಧವನ್ನು ಬಲಪಡಿಸಿ ಸಂತೋಷ, ಪ್ರೀತಿ ಮತ್ತು ತಿಳುವಳಿಕೆಯ ವಾತಾವರಣ ಸೃಷ್ಟಿಸುವ ಅವರ ಬದ್ಧತೆಗೆ ಮೆಚ್ಚುಗೆ ಸೂಚಿಸುವ ಸುಸಂದರ್ಭವಾಗಿದೆ. ಪೋಷಕರು ತಮ್ಮ ಅಂತರ್ಗತ ಸಾಮರ್ಥ್ಯ ಮತ್ತು ಪ್ರತಿಭೆಗಳಿಗೆ ಅನುಗುಣವಾಗಿ ತಮ್ಮ ಮಕ್ಕಳ ವ್ಯಕ್ತಿತ್ವವನ್ನು ರೂಪಿಸುತ್ತಾರೆ. ಅವರಿಗೆ ನೈತಿಕ ಮೌಲ್ಯಗಳು ಮತ್ತು ಜೀವನವನ್ನು ಸಂಪೂರ್ಣವಾಗಿ ಜೀವಿಸುವ ಚೈತನ್ಯ ತುಂಬುತ್ತಾರೆ.
ಪೋಷಕರ ತ್ಯಾಗ, ಪೋಷಣೆ ಮತ್ತು ಕಾಳಜಿ, ಅವರಲ್ಲಿನ ಭಾವನಾತ್ಮಕ ಶಕ್ತಿಯು ಬೆಳೆಯುತ್ತಿರುವಾಗ ಮಕ್ಕಳಿಗೆ ಕೃತಜ್ಞತೆಯ ಸಂಕೇತವಾಗಿದೆ. ಪೋಷಕರೆಂದರೇ ಭೌತಿಕ ಅಗತ್ಯಗಳನ್ನು ಪೂರೈಸುವವರಲ್ಲ. ಮಗುವಿನ / ಮಕ್ಕಳ ವರ್ತನೆ ಮತ್ತು ನಡವಳಿಕೆಯಲ್ಲಿ ಸಂಸ್ಕಾರದ ಮೌಲ್ಯಗಳನ್ನು ಬಿತ್ತುವ ಮಾರ್ಗದರ್ಶಕರೂ ಆಗುತ್ತಾರೆ. ಪೋಷಕರಿಂದ ಪ್ರೇರೇಪಿತಗೊಂಡ ಧನಾತ್ಮಕ ಶಕ್ತಿಯ ಜೀವಿತಾವಧಿಯ ಉದ್ದಕ್ಕೂ ಉಳಿದುಕೊಳ್ಳುತ್ತದೆ.
ಈ ದಿನವನ್ನು ಸ್ಮರಣೀಯವಾಗಿಸಲು ಮಕ್ಕಳು ತಮ್ಮ ಪೋಷಕರೊಂದಿಗನ ಫೋಟೋಗಳು, ಕೋಲೆಜ್ ಫೋಟೋಗಳು, ಸ್ಟಿಕ್ಕರ್, ರೇಖಾಚಿತ್ರ, ಕೈಯಿಂದ ಮಾಡಿದ ಶಿರೋವಸ್ತ್ರ, ಬಾಕ್ಸ್, ಮಡಿಕೆ ಇತರೆ ವಸ್ತುಗಳನ್ನು ‘ಧನ್ಯವಾದಗಳ’ ಪ್ರತೀಕವಾಗಿ ಪೋಷಕರಿಗೆ ಉಡುಗೊರೆ ನೀಡುತ್ತಾರೆ. ಇನ್ನು ಕೆಲವಡೆ ಪೋಷಕರಿಗೆ ಸಾಹಸ ಕ್ರೀಡೆಗಳು, ಕುಟುಂಬ ಜತೆ ಪಿಕ್ನಿಕ್. ಔತಣ ಕೂಟ, ಸಿನಿಮಾ, ಉಡುಗೊರೆ ಚೀಟಿ, ಕೋಣೆ ಸ್ವಚ್ಛಗೊಳಿಸುವಂತದ್ದು ಮಾಡುತ್ತಾರೆ.
ಅಮೆರಿಕದ ಪ್ರತಿ ರಾಜ್ಯವು ಉತ್ತಮ ಪೋಷಕರನ್ನು ನಾಮನಿರ್ದೇಶನ ಮಾಡುತ್ತದೆ. ಮಕ್ಕಳ ಆರೈಕೆಯಲ್ಲಿ ಅವರ ಸೇವಾ ಕೈಂಕರ್ಯ ಉದಾಹರಿಸುತ್ತಾ ಗುಣಗಾನ ಮಾಡಿ, ಅವರನ್ನು ವರ್ಷದ ರಾಷ್ಟ್ರೀಯ ಪೋಷಕರ ಪ್ರಶಸ್ತಿ ನೀಡುತ್ತಾರೆ.
ಅಂತಾರಾಷ್ಟ್ರೀಯ ಅಧ್ಯಯನಗಳು ಹೇಳುವಂತೆ, ಭಾರತೀಯ ಪೋಷಕರು ತಮ್ಮ ಮಕ್ಕಳ ಬಗ್ಗೆ ಇತರೆ ರಾಷ್ಟ್ರೊಗಳಿಗೆ ಹೆಚ್ಚು ಕಾಳಜಿ ವಹಿಸುತ್ತಾರೆ ಎಂಬುದನ್ನು ಶ್ಲಾಘಿಸಿವೆ.
ವಿಶ್ವಾದ್ಯಂತ ಕಾಲು ಭಾಗದಷ್ಟು ಪೋಷಕರು ತಮ್ಮ ಮಕ್ಕಳಿಗೆ ವಾರದಲ್ಲಿ ಏಳು ಅಥವಾ ಅದಕ್ಕಿಂತ ಹೆಚ್ಚು ಗಂಟೆಗಳ ಕಾಲ ಅವರ ಅಧ್ಯಯನಕ್ಕೆ ನೆರವಾಗುತ್ತಾರೆ. ಕೊಲಂಬಿಯಾದಲ್ಲಿ ಶೇ 39ರಷ್ಟು, ವಿಯೆಟ್ನಾಂನಲ್ಲಿ ಶೇ 50ರಷ್ಟು ಮತ್ತು ಭಾರತದಲ್ಲಿ ಶೇ 62ರಷ್ಟಿದೆ.
ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಈ ಪ್ರಮಾಣವು ನಾಟಕೀಯವಾಗಿ ಬೀಳುತ್ತದೆ. ಇಂಗ್ಲೆಂಡ್ನಲ್ಲಿ ಕೇವಲ ಶೇ 11ರಷ್ಟು, ಫ್ರಾನ್ಸ್ ಮತ್ತು ಜಪಾನ್‌ನಲ್ಲಿ ಶೇ 10, ಮತ್ತು ಫಿನ್‌ಲ್ಯಾಂಡ್‌ನಲ್ಲಿ ಶೇ 5ರಷ್ಟು ಪೋಷಕರು ಮಾತ್ರ ಶಾಲೆ ಬಿಟ್ಟ ಬಳಿಕ ತಮ್ಮ ಮಕ್ಕಳಿಗೆ ಸಹಾಯ ಮಾಡುತ್ತಾರೆ.
ಭಾರತೀಯ ಪೋಷಕರು ವಾರದಲ್ಲಿ ಸರಾಸರಿ 12 ಗಂಟೆಗಳ ಕಾಲ ಮನೆಕೆಲಸಕ್ಕೆ ಸಹಾಯ ಮಾಡುತ್ತಾರೆ. ವಿಯೆಟ್ನಾಂ ಪೋಷಕರು 10.2 ಗಂಟೆಗಳ ಕಾಲ ಬಿಡುವು ಮಾಡಿಕೊಳ್ಳುತ್ತಾರೆ. ಶಾಲೆಯ ನಂತರದ ಕಲಿಕೆಗೆ 8.7 ಗಂಟೆಗಳ ಸಮಯ ಮೀಸಲಿಟ್ಟ ಟರ್ಕಿ ಅಮ್ಮ ಮತ್ತು ಅಪ್ಪಂದಿರು ಮೂರನೇ ಸ್ಥಾನ ಪಡೆದಿದ್ದಾರೆ.
ಜಾಗತಿಕವಾಗಿ ಶಾಲೆಯಿಂದ ಹೊರಗಿರುವ ಶೈಕ್ಷಣಿಕ ನಿಶ್ಚಿತಾರ್ಥಕ್ಕಾಗಿ ವಾರದಲ್ಲಿ 6.7 ಗಂಟೆಗಳ ಕಾಲ ವ್ಯಯಿಸಲಾಗುತ್ತಿತ್ತು, ಆಫ್ರಿಕಾ, ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕದ ದೇಶಗಳ ಪೋಷಕರು ಸರಾಸರಿಗಿಂತ ಹೆಚ್ಚಿನ ಮಟ್ಟದ ಸಹಾಯವನ್ನು ನೀಡುತ್ತಾರೆ.
ಯುನೈಟೆಡ್ ಸ್ಟೇಟ್ಸ್ ಮತ್ತು ಪೋಲೆಂಡ್‌ನ ಪೋಷಕರು ತಲಾ 6.2 ಗಂಟೆಗಳ ಸಮಯವನ್ನು ನೀಡಿದರೆ, ಯುಕೆಯಲ್ಲಿರುವವರು 3.6 ಗಂಟೆಗಳ ಸಮಯವನ್ನು ಬಿಟ್ಟುಕೊಡುತ್ತಾರೆ. ಫಿನ್‌ಲ್ಯಾಂಡ್‌ನ ಪೋಷಕರು 3.1 ಗಂಟೆಗಳ ಸಮಯವನ್ನು ನೀಡುತ್ತಾರೆ, ಮತ್ತು ಜಪಾನಿನ ಪೋಷಕರು ಪ್ರತಿ ವಾರ 2.6 ಗಂಟೆಗಳ ಕಾಲ ಸಹಾಯ ಮಾಡುತ್ತಾರೆ.
ಬಡ ಪೋಷಕ ಕುಲದೀಪ್ ಕುಮಾರ್ ಮತ್ತು ಅವರ ಪತ್ನಿ ತಮ್ಮ ಇಬ್ಬರು ಮಕ್ಕಳ ಆನ್‌ಲೈನ್ ಕಲಿಕೆಗೆ ಸ್ಮಾರ್ಟ್‌ಫೋನ್ ಖರೀದಿಸಲು ತಮ್ಮ ಆದಾಯದ ಮೂಲವಾದ 6,000 ರೂ.ಗೆ ಹಸುವನ್ನೇ ಮಾರಾಟ ಮಾಡಿದ್ದಾರೆ. ಕೋವಿಡ್ ಲಾಕ್‌ಡೌನ್‌ನಿಂದಾಗಿ ಆಂಧ್ರಪ್ರದೇಶದಲ್ಲಿ ಸಿಲುಕಿಕೊಂಡಿದ್ದ ತನ್ನ ಹರೆಯದ ಮಗನನ್ನು ಕರೆದುಕೊಂಡು ಹೋಗಲು ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ 50 ವರ್ಷದ ಮಹಿಳೆಯೊಬ್ಬರು 700 ಕಿ.ಮೀ ದೂರದಲ್ಲಿರುವ ನೆಲ್ಲೂರಿಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣ ಬೆಳೆಸಿದಳು. ಆ ಮೂರು ದಿನಗಳಲ್ಲಿ ಒಟ್ಟು 1,400 ಕಿ.ಮೀ. ಸ್ಕೂಟೆರ್ನಲ್ಲಿ ಪ್ರಯಾಣಿಸಿದಳು. ನಗರದಿಂದ ತವರಿನತ್ತ ತೆರಳುತ್ತಿರುವ ದಿನಗೂಲಿ ಮಹಿಳೆಯೊಬ್ಬಳು, ತನ್ನ ಸೂಟ್‌ಕೇಸ್ ಮೇಲೆ ದಣಿದು ಬಸವಳಿದ ಮಗುವನ್ನು ಎಳೆದೊಯ್ಯುತ್ತಾಳೆ. ಇಂತಹ ಅಂದೇಷ್ಟು ಹೃದಯವಿದ್ರಾವಕ ಘಟನಗಳು ಸಂಭವಿಸುತ್ತಲೇ ಇರುತ್ತವೆ. ಇವೆಲ್ಲ ಮಕ್ಕಳಿಗಾಗಿ ಪೋಷಕರು ಎಂತಹ ತ್ಯಾಗಕ್ಕೂ ಸಿದ್ಧ ಎಂಬುದನ್ನು ಸಾರುತ್ತವೆ.
ಆದರೆ ಇತ್ತೀಚಿನ ದಿನಗಳಲ್ಲಿ ವಯಸ್ಸಾದವರನ್ನು ನೋಡಿಕೊಳ್ಳುವುದು ಅವರ ಮಕ್ಕಳಿಗೆ ಹೊರೆ ಆಗುತ್ತಿರುವುದು ಶೋಚನೀಯ ಸಂಗತಿ. ಚಿಗುರೆಲೆಗೆ ಆಸರೆಯಾದ ಪೋಷಕರನ್ನು ಹಣ್ಣೆಲೆಯಾದಗ ನೋಡಿಕೊಳ್ಳುವುದು ಮಕ್ಕಳ ಕರ್ತವ್ಯ ಮತ್ತು ಸಾಮಾಜಿಕ ಬಾಧ್ಯತೆ.