ನೀಲಗಿರಿ (ತಮಿಳುನಾಡು): ಮೂರು ದಿನಗಳ ಹಿಂದೆ ಗಾಯಗೊಂಡಿದ್ದ ಗಜರಾಜನನ್ನು ವೈದ್ಯಕೀಯ ಚಿಕಿತ್ಸೆಗೆ ಎಂದು ತಮಿಳುನಾಡಿನ ಮದುಮಲೈ ಆನೆ ಶಿಬಿರಕ್ಕೆ ಕರೆದೊಯ್ಯುವ ಮಾರ್ಗಮಧ್ಯೆ ಅದು ಸಾವನ್ನಪ್ಪಿದೆ.
ನೀಲಗಿರಿ ಜಿಲ್ಲೆಯ ಮಸಿನಗುಡಿ ಅರಣ್ಯದಲ್ಲಿ 40 ವರ್ಷದ ಈ ಆನೆ ಗಾಯಗೊಂಡಿತ್ತು. ಆನೆಯ ಎಡ ಕಿವಿ ಹರಿದಿದ್ದು, ಸುಟ್ಟ ಗಾಯಗಳಿಂದ ಬಳಲುತ್ತಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಸಿಡಿಸಿ, ಆನೆಯನ್ನು ಕೊಲ್ಲಲು ಯತ್ನಿಸಿದ್ದರೆಂಬುದು ಬಯಲಾಗಿದೆ.
ಇದನ್ನೂ ಓದಿ: ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಬಾಲಕಿ ಹೃದಯಾಘಾತದಿಂದ ಸಾವು
ಈ ಬಗ್ಗೆ ತನಿಖೆ ನಡೆಸಲು ಸಮಿತಿಯೊಂದನ್ನು ರಚಿಸಲಾಗಿದೆ. ಕೃತ್ಯ ಎಸಗಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮದುಮಲೈ ಹುಲಿ ಸಂರಕ್ಷಣಾ ವಲಯದ ನಿರ್ದೇಶಕ ಶ್ರೀಕಾಂತ್ ತಿಳಿಸಿದ್ದಾರೆ.
ಈ ಆನೆಯು ಅನೇಕ ವರ್ಷಗಳಿಂದ ಮಸಿನಗುಡಿ ಸುತ್ತಮುತ್ತಲಿನ ಗ್ರಾಮಗಳ ಬಳಿ ತಿರುಗುತ್ತಿದ್ದರೂ ಯಾರಿಗೂ ಹಾನಿಮಾಡಿರಲಿಲ್ಲ. ಹೀಗಾಗಿ ಗಜರಾಜನ ಸಾವಿನ ಸುದ್ದಿ ಕೇಳಿ ದುಃಖಿತರಾದ ಗ್ರಾಮಸ್ಥರು ಒಂದೆಡೆ ಸೇರಿ, ಆನೆಯ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ, ದೀಪ ಬೆಳಗಿ ಮೌನಾಚರಣೆ ಮಾಡಿದ್ದಾರೆ.