ನವದೆಹಲಿ: ಸ್ಥಳೀಯ ಕೋವಿಡ್ -19 ಲಸಿಕೆಗಾಗಿ ಆಗಸ್ಟ್ 15ರ ಗಡುವಿಗೆ ಸಂಬಂಧಿಸಿದಂತೆ ಸುರಕ್ಷತೆ ಮತ್ತು ರಕ್ಷಣೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಸರಿಯಾಗಿ ಅನುಮೋದಿತ ಕ್ಲಿನಿಕಲ್ ಪ್ರಯೋಗಗಳನ್ನು ತ್ವರಿತಗೊಳಿಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.
ಸುದ್ದಿಗೋಷ್ಠಿಯಲ್ಲಿ ಆರೋಗ್ಯ ಸಚಿವಾಲಯದ ವಿಶೇಷ ಕರ್ತವ್ಯ ಅಧಿಕಾರಿ ರಾಜೇಶ್ ಭೂಷಣ್, 'ದಯವಿಟ್ಟು ಡಿಜಿಐಸಿಎಂಆರ್ ಪತ್ರದಲ್ಲಿ ಇಲ್ಲದ್ದನ್ನೆಲ್ಲಾ ಓದಬೇಡಿ. ಸುರಕ್ಷತೆ ಮತ್ತು ರಕ್ಷಣೆಗೆ ಧಕ್ಕೆ ಆಗದಂತೆ ಸರಿಯಾಗಿ ಅನುಮೋದಿತ ಕ್ಲಿನಿಕಲ್ ಪ್ರಯೋಗಗಳನ್ನು ತ್ವರಿತಗೊಳಿಸುವುದು ಮಾತ್ರ ಪತ್ರದ ಕಾಳಜಿ ಆಗಿದೆ' ಎಂದರು.
ಇದಕ್ಕೂ ಮೊದಲು ಐಸಿಎಂಆರ್ ಡಿಜಿ ಬಾಲರಾಮ್ ಭಾರ್ಗವ ಅವರು ಭಾರತ್ ಬಯೋಟೆಕ್ ಮತ್ತು ವೈದ್ಯಕೀಯ ಕಾಲೇಜುಗಳ ಪ್ರಧಾನ ತನಿಖಾಧಿಕಾರಿಗಳಿಗೆ ಪತ್ರವೊಂದನ್ನು ಬರೆದಿದ್ದಾರೆ. ದೇಶಿಯ ಕೋವಿಡ್-19 ಲಸಿಕೆಯ ಪ್ರಯೋಗ ಪ್ರಕ್ರಿಯೆಯನ್ನು ತ್ವರಿತವಾಗಿ ಟ್ರ್ಯಾಕ್ ವಿಧಾನದಲ್ಲಿ ಪೂರ್ಣಗೊಳಿಸಿ. ಆಗಸ್ಟ್ 15ರೊಳಗೆ ಕ್ಲಿನಿಕಲ್ ಪ್ರಯೋಗದ ಫಲಿತಾಂಶ ನೀಡಬಹುದು. ಕ್ಲಿನಿಕಲ್ ಪ್ರಯೋಗಗಳನ್ನು ಸ್ಟೇಜ್-1 ಮತ್ತು ಸ್ಟೇಜ್-2ಗೆ ತೆಗೆದುಕೊಂಡು ಹೋಗಲು ಎರಡು ಲಸಿಕೆಗಳಿಗೆ ಡಿಸಿಜಿಐ ಅನುಮತಿಸಿದೆ ಎಂದು ಹೇಳಿದ್ದಾರೆ.
ಭಾರತ್ ಬಯೋಟೆಕ್ ಮತ್ತು ಕ್ಯಾಡಿಲಾ ಹೆಲ್ತ್ ಕೇರ್ ಜಂಟಿಯಾಗಿ ಲಸಿಕೆಗಳನ್ನು ಅಭಿವೃದ್ಧಿಪಡಿಸುತ್ತಿವೆ. ಎರಡೂ ಲಸಿಕೆಗಳು ಅನುಮೋದನೆಯ ನಂತರ ಪ್ರಾಣಿಗಳ ಮೇಲಿನ ಅಧ್ಯಯನವನ್ನು ಪೂರ್ಣಗೊಳಿಸಿವೆ. ಪ್ರಯೋಗಗಳು ಇನ್ನೂ ಪ್ರಾರಂಭವಾಗಬೇಕಿದೆ. ಇದು ಶೀಘ್ರದಲ್ಲೇ ಆರಂಭವಾಗುತ್ತದೆ ಎಂದು ಭಾವಿಸುತ್ತೇವೆ ಎಂದಿದ್ದಾರೆ.