ಪುಣೆ: ಅಮೆರಿಕದಲ್ಲಿ ಇತ್ತೀಚೆಗೆ ವಿಶ್ವದ ಅತ್ಯಂತ ವೇಗದ ಸಾರಿಗೆ ಹೈಪರ್‌ಲೂಪ್ ವೆಹಿಕಲ್ನ ಯಶಸ್ವಿ ಪ್ರಯೋಗ ನಡೆಯಿತು. ಈ ವಾಹನದಲ್ಲಿ ಮಾನವರನ್ನ ಕೂರಿಸಿ ಪ್ರಯೋಗಕ್ಕೆ ಒಳಪಡಿಸಲಾಯಿತು.
ಈ ಮಹತ್ವದ ಹಾಗೂ ಅಚ್ಚರಿಯ ಸಂಶೋಧನಾ ಪರೀಕ್ಷಾರ್ಥ ಪ್ರಯೋಗದಲ್ಲಿ ಭಾರತೀಯ ಪುಣೆಯ ತನಯ್ ಮಂಜ್ರೇಕರ್ಗೆ ಅವಕಾಶ ನೀಡಲಾಗಿತ್ತು. ಮಹಾರಾಷ್ಟ್ತದ ಪುಣೆಯ ಮಂಜ್ರೇಕರ್ ಈ ಪ್ರಯೋಗದಲ್ಲಿ ಪಾಲ್ಗೊಂಡಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿದ್ದಾರೆ. ಈ ಮೂಲಕ ವೆರ್ಜಿನ್ ಕಂಪನಿಯ ಹೈಪರ್‌ಲೂಪ್ ವಾಹನದ ಪರೀಕ್ಷಾರ್ಥ ಪ್ರಯೋಗದಲ್ಲಿ ಪಾಲ್ಗೊಂಡ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಲಾಸ್ವೇಗಾಸ್ನ ಪರೀಕ್ಷಾರ್ಥ ಕೇಂದ್ರದಲ್ಲಿ ಸೋಮವಾರ ಮೊದಲ ಮಾನವ ಪ್ರಯಣದ ಪರೀಕ್ಷೆ ನಡೆಸಲಾಯಿತು. ತನಯ್ ಮಂಜ್ರೇಕರ್ ಎರಡನೇ ಬಾರಿ ಇಂತಹ ಪರೀಕ್ಷಾರ್ಥ ಪ್ರಯೋಗದಲ್ಲಿ ಪಾಲ್ಗೊಂಡಿದ್ದಾರೆ ಎನ್ನುವುದು ವಿಶೇಷ. ಇಲ್ಲಿಯವರೆಗೂ ಹೈಪರ್‌ಲೂಪ್ ವೆಹಿಕಲ್ನ 400 ಅನಿಗದಿತ ಪರೀಕ್ಷೆಗಳು ನಡೆದಿವೆಯಂತೆ.
ಈ ಬಗ್ಗೆ ಮಾತನಾಡಿರುವ ತನಯ್, ನಾನು ಹೈಪರ್‌ಲೂಪ್ ಸಾರಿಗೆ ಪರೀಕ್ಷಾರ್ಥ ಪ್ರಯೋಗದಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ. ಈ ಕನಸಿನ ಪ್ರಯಾಣದಲ್ಲಿ ಪ್ರಯಾಣಿಸಿರುವುದು ತನ್ನ ಕನಸನ್ನು ನನಸು ಮಾಡಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ. ಪುಣೆಯ ಸಾವಿತ್ರಿಭಾಯಿ ಫುಲೆ ವಿವಿಯ ಎಲೆಕ್ಟ್ರಾನಿಕ್ಸ್ ಅಂಡ್ ಟೆಲಿಕಮ್ಯುನಿಕೇಷನ್ನಲ್ಲಿ ಪದವಿ ಪಡೆದಿರುವ ತನಯ್, 2016 ರಿಂದ ವರ್ಜಿನ್ ಹೈಪರ್ಲೂಪ್ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ.